ಚಾಮರಾಜನಗರ: ಅಬ್ಬಾ! ಏನು ಆ ಹೊಳಪಿನ ಕಣ್ಣು, ಮೈ ನಡುಕವುಂಟು ಮಾಡುವ ಭಾರೀ ಗಾತ್ರದ ದೇಹ, ತಡೆಗೋಡೆಯನ್ನೇ ಸಿಂಹಾಸನ ಮಾಡಿಕೊಂಡು ಕುಳಿತು, ಎಂತಹವರಿಗೂ ಕ್ಷಣಕಾಲ ಮೈ ಬೆವರುವಂತೆ ಮಾಡುವ ಚಿರತೆಯ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಭಾರೀ ಗಾತ್ರದ ಚಿರತೆಯೊಂದು ಬೆಂಗಳೂರು-ಕೊಯಂಬತ್ತೂರು ರಾಷ್ಟ್ರೀಯ ಹೆದ್ದಾರಿಯ ತಮಿಳುನಾಡಿಗೆ ಒಳಪಡುವ ದಿಂಬಂನ 24ನೇ ತಿರುವಿನ ತಡೆಗೋಡೆ ಮೇಲೆ ಕುಳಿತಿತ್ತು. ಇದೇ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರ ಕಣ್ಣಿಗೆ ಅಕಸ್ಮಾತಾಗಿ ಬಿದ್ದ ಚಿರತೆಯ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಈರೋಡಿನಿಂದ ಬೆಂಗಳೂರಿನತ್ತ ಕಾರಿನಲ್ಲಿ ಬರುತ್ತಿದ್ದ ಯುವಕರ ಗುಂಪಿಗೆ ಚಿರತೆ ಕಂಡಿದ್ದು, ತಡೆಗೋಡೆ ಮೇಲೆ ವಿರಾಜಮಾನವಾಗಿ ಕುಳಿತು ಗುರಾಯಿಸುತ್ತಿದ್ದನ್ನು ಹೆದರುತ್ತಲೇ ವಿಡಿಯೋ ಮಾಡಿದ್ದಾರೆ. ಈ ದೃಶ್ಯವನ್ನು ಕಂಡವರ ಎದೆಯೂ ವೇಗವಾಗಿ ಬಡಿದುಕೊಳ್ಳುತ್ತದೆ.
ಸತ್ಯಮಂಗಲ ಅರಣ್ಯ ಪ್ರದೇಶಕ್ಕೆ ಒಳಪಡುವ ರಸ್ತೆಯಲ್ಲಿ ಆಗಾಗ್ಗೆ ಚಿರತೆಗಳು ಕಂಡರೂ ಸಂಜೆ 8ರ ಸಮಯದಲ್ಲಿ ಈ ಪರಿ ಗಾತ್ರದ ಚಿರತೆ ಕಾಣಸಿಗುವುದು ಅಪರೂಪ ಎಂದು ಸ್ಥಳೀಯರು ಹೇಳಿದ್ದಾರೆ.