ಚಾಮರಾಜನಗರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಚಾಮರಾಜೇಶ್ವರ ದೇವಾಲಯದ ಉತ್ಸವ ಮೂರ್ತಿಗಳಿಗೆ ತಮಿಳುನಾಡಿನ ಚೆನ್ನೈನ ಭಕ್ತರೊಬ್ಬರು 100 ವರ್ಷ ಬಾಳಿಕೆ ಬರುವ ಚಿನ್ನ ಲೇಪಿತ ಬೆಳ್ಳಿ ಆಭರಣಗಳನ್ನು ಅರ್ಪಿಸಿದ್ದಾರೆ.
ತಂದೆ ಕಾಲದಲ್ಲಿ ಚಾಮರಾಜನಗರದಲ್ಲಿ ವಾಸವಿದ್ದು, ಈಗ ಚೆನ್ನೈನಲ್ಲಿ ಬದುಕು ರೂಪಿಸಿಕೊಂಡಿರುವ ಶ್ರೀಕಂಠಸ್ವಾಮಿ ಎಂಬುವರು ಶುದ್ಧ ಬೆಳ್ಳಿಯಿಂದ ತಯಾರಿಸಿ, ಚಿನ್ನ ಲೇಪಿತದಿಂದ ಕಂಗೊಳಿಸುತ್ತಿರುವ 21 ಬಗೆಯ ಆಭರಣಗಳನ್ನು ಚಾಮರಾಜೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಶ್ರದ್ಧಾ-ಭಕ್ತಿಯಿಂದ ಅರ್ಪಿಸಿದ್ದಾರೆ.
ಆಭರಣ ತಯಾರಕರು ಚಿನ್ನದ ಲೇಪನಕ್ಕೆ 100 ವರ್ಷದ ಬಾಳಿಕೆಯ ವಿಶ್ವಾಸ ನೀಡಿದ್ದು ಕಿರೀಟ, ಜನಿವಾರ, ಕೋರಂಬ, ಚಂದ್ರ, ಎದೆ ಕಚಚ, ಹಸ್ತ, ವಿಭೂತಿ, ಪಾದ, ಪೀಠಗಳು ಕಾಣಿಕೆಯಲ್ಲಿ ಒಳಗೊಂಡಿದ್ದು 7.5 ಲಕ್ಷ ರೂ. ಮೌಲ್ಯ ಹೊಂದಿರುವುದಾಗಿ ಕಂದಾಯ ನಿರೀಕ್ಷಕ ರಾಜಣ್ಣ ತಿಳಿಸಿದ್ದಾರೆ.
ಈ ಸಂಬಂಧ ಭಕ್ತರಾದ ಶ್ರೀಕಂಠಸ್ವಾಮಿ ಮಾತನಾಡಿ, ಚಾಮರಾಜೇಶ್ವರ ಸ್ವಾಮಿ ಕೃಪೆಯಿಂದ ಉತ್ತಮ ಜೀವನ ಸಾಗಿಸುತ್ತಿದ್ದು, ಉತ್ಸವ ಮೂರ್ತಿಗಳಿಗೆ ಆಭರಣ ಇಲ್ಲದ ವಿಚಾರ ತಿಳಿದು ಧಾರ್ಮಿಕ ವಿಧಿ-ವಿಧಾನದಂತೆ ಅರ್ಪಿಸಿದ್ದೇನೆ. ಕನಿಷ್ಠ 100 ವರ್ಷಗಳ ಕಾಲ ಆಭರಣಗಳ ಮೇಲಿನ ಚಿನ್ನದ ಲೇಪನ ಮಾಸುವುದಿಲ್ಲವೆಂದು ತಯಾರಕರು ವಿಶ್ವಾಸ ಕೊಟ್ಟಿದ್ದು, ಭವಿಷ್ಯದಲ್ಲೂ ಶಕ್ತ್ಯಾನುಸಾರ ಸ್ವಾಮಿ ಸೇವೆ ಮಾಡುತ್ತೇನೆಂದರು.
ಹೊಸ ಆಭರಣಗಳಿಂದ ಉತ್ಸವ ಮೂರ್ತಿಗಳು ಕಂಗೊಳಿಸುತ್ತಿದ್ದು, ದೇವರ ವೈಭವವನ್ನು ನೂರಾರು ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ.