ಚಾಮರಾಜನಗರ: ಒಂದು ಸರ್ಕಾರಿ ನೌಕರಿ ಪಡೆಯುವುದೇ ಕಷ್ಟ. ಒಮ್ಮೆ ಓದುವುದನ್ನು ಬಿಟ್ಟರೆ ಮತ್ತೆ ತಲೆಗೆ ವಿದ್ಯೆ ಹತ್ತಲ್ಲ ಎಂಬುದಕ್ಕೆ ಅಪವಾದದಂತೆ ನೌಕರಿ ಮಾಡುತ್ತಿದ್ದರೂ ನಿರಂತರ ಓದಿನಿಂದ ಲೈನ್ಮನ್ ಒಬ್ಬರು ಕಿರಿಯ ಇಂಜಿನಿಯರ್ ಆಗಿದ್ದಾರೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿರುವ ಚೆಸ್ಕಾಂ ಉಪವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಸಂತಕುಮಾರ್ 7 ಸರ್ಕಾರಿ ಕೆಲಸ ಬದಲಿಸಿ ಅಧಿಕಾರಿಯಾಗಿದ್ದಾರೆ.
ಉದ್ಯೋಗಯಾನ ಹೀಗಿದೆ:
1998-2000 ರಲ್ಲಿ ದಾವಣಗೆರೆಯಲ್ಲಿ ಐಟಿಐ (ಇಲೆಕ್ಟ್ರಿಶಿಯನ್)ನಲ್ಲಿ 3ನೇ ರ‍್ಯಾಂಕ್ ಪಡೆದು ತೇರ್ಗಡೆಯಾಗುತ್ತಿದ್ದಂತೆ, 18 ವರ್ಷ 1 ತಿಂಗಳಿಗೆ ಟೊಯೊಟಾ ಕಿರ್ಲೋಸ್ಕರ್ನಲ್ಲಿ ಮೊದಲ ನೌಕರಿ ಪಡೆಯುತ್ತಾರೆ. ಆದರೆ ಸರ್ಕಾರಿ ನೌಕರಿ ಮೇಲಿನ ಮೋಹದಿಂದ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಹಿಡಿಯುತ್ತಾರೆ.
ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದ ಕೆಲಸದಲ್ಲಿ ತೃಪ್ತಿ ಕಾಣದೇ ಬಿಎಂಟಿಸಿಯಲ್ಲಿ ಮೂರನೇ ನೌಕರಿ ಪಡೆಯುತ್ತಾರೆ. ಈ ವೇಳೆ ತಾಯಿ ನಿಧನರಾದ ಬಳಿಕ ಮತ್ತೊಮ್ಮೆ ಪರೀಕ್ಷೆ ಬರೆದು ಕೆಎಸ್ಆರ್ಟಿಸಿಯ ನೌಕರಿ ಪಡೆದು ದಾವಣಗೆರೆಗೆ ತೆರಳುತ್ತಾರೆ.
2005ರಲ್ಲಿ ಕೆಇಬಿಯಲ್ಲಿ ಉದ್ಯೋಗ ಕರೆದಾಗ ಐಟಿಐನಲ್ಲಿ 3ನೇ ರ‍್ಯಾಂಕ್ ಪಡೆದಿದ್ದರಿಂದ ಮೊದಲಿಗೆ ಕೆಪಿಟಿಸಿಎಲ್ನಲ್ಲಿ ಕಾರ್ಯ ನಿರ್ವಹಿಸಿ ತೃಪ್ತರಾಗದೇ ಬೆಸ್ಕಾಂನಲ್ಲಿ ಲೈನ್ ಮನ್ ಹುದ್ದೆ ಪಡೆಯುತ್ತಾರೆ. ಚನ್ನಗಿರಿ ತಾಲೂಕಿನಲ್ಲಿ ಲೈನ್ಮನ್ ಆಗಿ 12 ವರ್ಷ ಕೆಲಸ ಮಾಡಿರುವ ವಸಂತಕುಮಾರ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದು ದೂರ ಶಿಕ್ಷಣದ ಮೂಲಕ ಬೆಂಗಳೂರು ವಿವಿಯಲ್ಲಿ ಬಿಎ ಪದವಿ ಪಡೆದು ಬಳಿಕ, 2012 ರಲ್ಲಿ ದಾವಣಗೆರೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಹೊರ ವಿದ್ಯಾರ್ಥಿಯಾಗಿ ಡಿಪ್ಲೊಮಾ ಪಡೆಯುತ್ತಾರೆ. ಲೈನ್ಮನ್ ಆಗಿದ್ದರಿಂದ ಬೆಳಗ್ಗೆ 4ಕ್ಕೆ ಎದ್ದು ತಮ್ಮ ಓದಿನಲ್ಲಿ ತೊಡಗಿಕೊಂಡು ಬಳಿಕ ರಾತ್ರಿ ವೇಳೆ ಡ್ರಾಯಿಂಗ್, ಬರಹದಲ್ಲಿ ರಾತ್ರಿ 12ರ ವರೆಗೆ ಓದಿ ಲೈನ್ ಮನ್ ವೃತ್ತಿ ಮಾಡುತ್ತಾ ಡಿಸ್ಟಿಂಕ್ಷನ್ನಲ್ಲಿ 2105ರಲ್ಲಿ ಡಿಪ್ಲೊಮಾ ತೇರ್ಗಡೆಯಾಗುತ್ತಾರೆ.
ಓದಿ: ವಾಲ್ಮೀಕಿ ಗುರುಪೀಠ ಅಭಿವೃದ್ಧಿಗೆ 10.8 ಕೋಟಿ ಅನುದಾನ ಬಿಡುಗಡೆ: ಸಿಎಂ ಬಿಎಸ್ವೈ
2016ರಲ್ಲಿ ಇಂಧನ ಇಲಾಖೆ ಜೆಇ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಲೈನ್ ಮನ್ ಆಗಿದ್ದ ವಸಂತಕುಮಾರ್ ಪರೀಕ್ಷೆ, ಸಂದರ್ಶನದಲ್ಲಿ ತೇರ್ಗಡೆ ಹೊಂದಿ ಕಿರಿಯ ಇಂಜಿನಿಯರ್ ಆಗಿ ಹರದನಹಳ್ಳಿಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಸಡ್ಡೆ ಬೇಡ ಶ್ರದ್ಧೆ ಇರಲಿ: ತಮ್ಮ ಈ ಉದ್ಯೋಗಯಾನದ ಕುರಿತು ವಸಂತಕುಮಾರ್ ಈಟಿವಿ ಭಾರತಕ್ಕೆ ಮಾತನಾಡಿ, ಯುವಕರು ಅಸಡ್ಡೆ ಬಿಟ್ಟು ಶ್ರದ್ಧೆಯಿಂದ ಓದಿದರೇ ಎಲ್ಲವೂ ಸಿಗಲಿದೆ ಎಂಬುದಕ್ಕೆ ನಾನೇ ಸಾಕ್ಷಿ. ಲೈನ್ ಮನ್ ಆಗಿಯೋ ಇಲ್ಲವೇ ಕೆಎಸ್ಆರ್ಟಿಸಿಯಲ್ಲಿ ಮೆಕ್ಯಾನಿಕ್ ಆಗಿಯೋ ನನ್ನ ಕರ್ತವ್ಯ ಮುಂದುವರೆಸಬಹುದಿತ್ತು. ಆದರೆ, ನನ್ನ ತಂದೆ-ತಾಯಿ ಕಷ್ಟಪಟ್ಟು ಕಾಲೇಜಿಗೆ ಕಳುಹಿಸುತ್ತಿದ್ದುದು, ನಾನೊಬ್ಬ ಅಧಿಕಾರಿಯಾಗಬೇಕೆಂಬ ಹಂಬಲ ಶಕ್ತಿಯಾಗಿ ಶ್ರದ್ಧೆಯಿಟ್ಟು ಓದಿದೆ ಫಲ ಸಿಕ್ಕಿದೆ. ನೆಗೆಟಿವ್ ಆಗಿ ಯೋಚನೆ ಮಾಡುವುದನ್ನು ಬಿಟ್ಟು ಓದಿನಲ್ಲಿ ಶ್ರದ್ಧೆ ಇಟ್ಟರೇ ಎಲ್ಲವೂ ಸಾಧ್ಯ ಎಂದು ಪ್ರತಿಕ್ರಿಯಿಸಿದರು.