ಚಾಮರಾಜನಗರ: ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ತಿಂಗಳುಗಳಲ್ಲಿ ಬಂಡೀಪುರದಲ್ಲಿ ಮತ್ತೊಂದು ಆನೆ ಶಿಬಿರ ಆರಂಭಗೊಳ್ಳಲಿದೆ. ಇಲ್ಲಿನ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ 21 ಆನೆಗಳಿದ್ದು, ಈಗ 7 ಆನೆಗಳನ್ನು ಬಂಡೀಪುರದ ಹಳೇ ಸಫಾರಿ ಕೌಂಟರ್ ಸಮೀಪ ಸ್ಥಳಾಂತರಿಸಲು ಯೋಜಿಸಲಾಗಿದೆ. ಹೀಗಾಗಿ ಪ್ರತ್ಯೇಕವಾದ ಎರಡನೇ ಆನೆ ಶಿಬಿರ ತಲೆ ಎತ್ತುವ ನಿರೀಕ್ಷೆ ಹೆಚ್ಚಾಗಿದೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, 13ರಿಂದ ಆನೆಗಳನ್ನು ಶಿಬಿರದಲ್ಲಿ ಇಟ್ಟುಕೊಳ್ಳಬಹುದಾಗಿದೆ. ರಾಂಪುರದಲ್ಲಿ 4 ಮರಿಯಾನೆ ಸೇರಿದಂತೆ 21 ಆನೆಗಳಿವೆ. ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಭೇಟಿ ವೇಳೆ 7 ಆನೆಗಳ ಸ್ಥಳಾಂತರಕ್ಕೆ ಮೌಖಿಕ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬಂಡೀಪುರದ ಹಳೇ ಸಫಾರಿ ಕೇಂದ್ರದ ಸಮೀಪ ಸ್ಥಳವನ್ನು ಗುರುತಿಸಲಾಗಿದೆ. ಮೇವು ಹಾಗೂ ನೀರು ಪೂರೈಕೆ ಬಗ್ಗೆಯೂ ಯೋಚಿಸಲಾಗಿದೆ. ಇದು ಇನ್ನೂ ಚಿಂತನೆಯ ಮಟ್ಟದಲ್ಲಿ ಇದ್ದು ಮುಂದೇನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ ಬಂಡೀಪುರದಲ್ಲಿ ಎರಡನೇ ಆನೆ ಶಿಬಿರ ತಲೆ ಎತ್ತಲಿದೆ. ಪ್ರವಾಸಿಗರನ್ನು ಸೆಳೆಯಲು ಹಾಗೂ ಕಾರ್ಯಾಚರಣೆಗೆ ಆನೆಯನ್ನು ಒಂದೆಡೆಯಿಂದ ಮತ್ತೊಂದೆಡೆ ಕರೆದೊಯ್ಯಲು ಬಂಡೀಪುರದಲ್ಲೇ ಶಿಬಿರ ಆರಂಭವಾದರೆ ಅನೂಕೂಲವಾಗಲಿದೆ.
ಇದನ್ನೂ ಓದಿ: ಮೈಸೂರು: ಮರಿಗಳೊಂದಿಗೆ ದರ್ಶನ ಕೊಟ್ಟ ಹುಲಿ - ವಿಡಿಯೋ