ಚಾಮರಾಜನಗರ : ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಚಾಮರಾಜನಗರ ಜಿಲ್ಲಾ ಪೊಲೀಸರು ದೊಡ್ಡ ಮೊತ್ತದ ದಂಡವನ್ನೇ ಸಂಗ್ರಹಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 69 ಲಕ್ಷ ರೂ. ಹಣ ಸಂಗ್ರಹಿಸಿದ್ದಾರೆ.
ಈಟಿವಿ ಭಾರತಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿರುವಂತೆ, ಜನವರಿಯಿಂದ ಮಾರ್ಚ್ ತನಕ ಒಟ್ಟು 20,839 ಕೇಸ್ ದಾಖಲಿಸಿ ₹69,76,400 ದಂಡ ಸಂಗ್ರಹಿಸಿದ್ದಾರೆ. ಇವುಗಳಲ್ಲಿ ಹೆಲ್ಮೆಟ್ ರಹಿತ ಚಾಲನೆಯೇ ಸಿಂಹಪಾಲನ್ನು ಪಡೆದಿದೆ.
3 ತಿಂಗಳಲ್ಲಿ 5577 ಹೆಲ್ಮೆಟ್ ರಹಿತ ಚಾಲನೆ ಪ್ರಕರಣ ದಾಖಲಿಸಿ 27,74,100 ರೂ. ಸಂಗ್ರಹಿಸಿದ್ದಾರೆ. ಉಳಿದಂತೆ, ಕುಡಿದು ವಾಹನ ಚಾಲನೆ ಮಾಡಿದವರಿಂದ 3 ಲಕ್ಷ ವಸೂಲಿ ಮಾಡಿದ್ದು, ಕಾರು ಸೀಟ್ ಬೆಲ್ಟ್ ಧರಿಸದ 1114 ಕೇಸ್ ದಾಖಲಿಸಿದ್ದಾರೆ.
5,57,500 ರೂ. ನೋ ಪಾರ್ಕಿಂಗ್, ಅಪಾಯಕಾರಿಯಾಗಿ ಪಾರ್ಕಿಂಗ್ ಮಾಡಿದವರಿಂದ 13 ಸಾವಿರ ರೂ., ಟ್ರಿಪಲ್ ರೈಡ್ ಮಾಡಿದವರಿಂದ 9300 ರೂ., ಇತರೆ ಸಂಚಾರಿ ನಿಯಮ ಉಲ್ಲಂಘನೆಯಿಂದ 33,18,500 ರೂ. ಸಂಗ್ರಹವಾಗಿದೆ.
ಆದರೆ, ಮೂರು ತಿಂಗಳಲ್ಲಿ ಟ್ರಿಪಲ್ ರೈಡಿಂಗ್ ಮಾಡಿದ ಕೇವಲ 10 ಕೇಸ್, ನಿಷೇಧಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ 13 ಕೇಸ್ಗಳಷ್ಟೇ ದಾಖಲಾಗಿವೆ. ಜೊತೆಗೆ ಕಳೆದ ಮೂರು ತಿಂಗಳಲ್ಲಿ ಪೊಲೀಸರು ಹೈ ಬೀಮ್ ಲೈಟ್ ಬಳಸಿದ್ದಕ್ಕೆ ಒಂದೂ ಕೇಸನ್ನು ದಾಖಲಿಸದಿರುವುದು ಅಂಕಿ-ಅಂಶಗಳು ತಿಳಿಸುತ್ತವೆ.
ಹೋದ ವರ್ಷ ಎಷ್ಟು ಸಂಗ್ರಹ : ಕಳೆದ ಕೊರೊನಾ ವರ್ಷದಲ್ಲಿ ಜಿಲ್ಲಾ ಪೊಲೀಸರು 55,064 ಪ್ರಕರಣ ದಾಖಲಿಸಿ 2 ಕೋಟಿ 26 ಸಾವಿರ ರೂ. ದಂಡ ಸಂಗ್ರಹಿಸಿದ್ದಾರೆ. ಅದರ ಹಿಂದಿನ ವರ್ಷ 2019ರಲ್ಲಿ ಬರೋಬ್ಬರಿ 1,04,514 ಕೇಸ್ ದಾಖಲಿಸಿ ₹2,01,56,800ರಷ್ಟು ಹಣ ಸಂಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, ಕಳೆದ ಸೆಪ್ಟೆಂಬರ್ನಿಂದ ಏಪ್ರಿಲ್ ಮೊದಲ ವಾರದ ತನಕ ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಪಾಡದವರಿಂದ 21 ಲಕ್ಷ ರೂ. ಸಂಗ್ರಹ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.