ಚಾಮರಾಜನಗರ: ವಾಹನದ ಹೊರಗೆ ತರಕಾರಿ ಸಾಗಿಸುವ ಖಾಲಿ ಕ್ರೇಟ್ ತುಂಬಿಕೊಂಡು ಒಳಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿದ್ದವರನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಫೈರೋಜ್ ಖಾನ್ ಹಾಗೂ ಗುಂಡ್ಲುಪೇಟೆಯ ಪ್ರೇಮ್ ಕುಮಾರ್ ಎಂಬಿಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ.
ಪ್ರೇಮ್ ಕುಮಾರ್ ಗುಂಡ್ಲುಪೇಟೆಯಲ್ಲಿ ದಾಸ್ತಾನಿಟ್ಟಿದ್ದ ಅಕ್ಕಿಯನ್ನು ಫೈರೋಜ್ ಖಾನ್ ಮಂಡ್ಯ ಕಡೆಗೆ ಸಾಗಾಟ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ 6,250 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 10 ಕೆಜಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂತ್ರಾಲಯಕ್ಕೆ ಹೊರಟಿದ್ದ ಬಸ್ನಲ್ಲಿ ಹಠಾತ್ ಕುಸಿದುಬಿದ್ದು ಕೆಎಸ್ಆರ್ಟಿಸಿ ಕಂಡಕ್ಟರ್ ಸಾವು
ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದವರ ಬಂಧನ: ಇನ್ನೊಂದು ಪ್ರಕರಣದಲ್ಲಿ ಮೊಲ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದ ವೇಳೆ ಇಬ್ಬರು ಬೇಟೆಗಾರರು ಸಿಕ್ಕಿಬಿದ್ದಿರುವ ಘಟನೆ ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ.
![6-tons-of-rice-siezed-by-police-in-chamarajanagar](https://etvbharatimages.akamaized.net/etvbharat/prod-images/14542893_newss.jpg)
ಅಣ್ಣೂರುಕೇರಿ ಗ್ರಾಮದ ಮಹೇಶ(35) ಹಾಗೂ ಕುಮಾರ್(27) ಬಂಧಿತ ಆರೋಪಿಗಳು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕರೆ ವಲಯ ವ್ಯಾಪ್ತಿಗೆ ಒಳಪಡುವ ಕುರುಬರಹುಂಡಿ ಮಡಿವಾಳಪ್ಪ ಎಂಬವರ ಜಮೀನಿನ ಹತ್ತಿರ ಮೊಲವೊಂದನ್ನು ಬೇಟೆಯಾಡಿ ಮಾಂಸ ಬೇಯಿಸುತ್ತಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಬೈಕ್, ನಾಡ ಬಂದೂಕು, ಬ್ಯಾಟರಿ, ಬೇಯಿಸಿದ ಮಾಂಸ ಹಾಗು ಪಾತ್ರೆಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.