ಚಾಮರಾಜನಗರ: ಸಾರಿಗೆ ನೌಕರರು ಕಳೆದ 11 ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮ ಚಾಮರಾಜನಗರ ವಿಭಾಗಕ್ಕೆ ಬರೋಬ್ಬರಿ ಐದೂವರೆ ಕೋಟಿ ರೂ. ನಷ್ಟವಾಗಿದೆ.
ಈ ಕುರಿತು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ 50 ಲಕ್ಷ ರೂ. ಆದಾಯ ಬರುತ್ತಿದ್ದು, ಈಗ ಮುಷ್ಕರ ನಡೆಸುತ್ತಿರುವ ಪರಿಣಾಮ ಅಂದಾಜು ಐದೂವರೆ ಕೋಟಿ ರೂ. ನಷ್ಟ ಉಂಟಾಗಿದೆ. ಕಳೆದ 6 ದಿನಗಳಿಂದ 11 ಲಕ್ಷ ಹಣ ಬಂದಿದೆ ಎಂದರು.
518 ಬಸ್ಗಳಲ್ಲಿ 260 ಬಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು, 460 ರೂಟ್ಗಳಲ್ಲಿ ಶೇ. 60ರಷ್ಟು ಬಸ್ ಸಂಚಾರ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಸ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 31 ಮಂದಿಯನ್ನು ಬೇರೆ ವಿಭಾಗಕ್ಕೆ, 17 ಮಂದಿಯನ್ನು ನಮ್ಮ ವಿಭಾಗದ ಬೇರೆ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
9 ಮಂದಿ ಕಾಯಂ ನೌಕರರನ್ನು ವಜಾ ಮಾಡಿದ್ದು, ನೋಟಿಸ್ ಕೊಟ್ಟರೂ ಹಾಜರಾಗದ 67 ಟ್ರೈನಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲು ಶಿಫಾರಸು ಮಾಡಲು ಮುಂದಾಗಿದ್ದೇವೆ. ಸೋಮವಾರ 10 ಗಂಟೆಯ ತನಕ ಕಾಲಾವಕಾಶ ಕೊಟ್ಟಿದ್ದು, ಬರದಿದ್ದರೆ ವಜಾಕ್ಕೆ ಶಿಫಾರಸು ಮಾಡುತ್ತೇನೆ ಎಂದರು.