ಚಾಮರಾಜನಗರ : ಕೊರೊನಾ ನಿಯಂತ್ರಣಕ್ಕಾಗಿ ಚಾಮರಾಜನಗರ ಜಿಲ್ಲಾದ್ಯಂತ ವಾರದಲ್ಲಿ 4 ದಿನಗಳು ಸಂಪೂರ್ಣ ಲಾಕ್‌ಡೌನ್ ವಿಧಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಟಾಸ್ಕ್ ಫೋರ್ಸ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಲಾಕ್‌ಡೌನ್ ಉದ್ದೇಶ, ಗಾಂಭೀರ್ಯತೆ ಜನರಿಗೆ ತಿಳಿಯುತ್ತಿಲ್ಲ. ಕಠಿಣ ನಿಯಮ ಮಾಡಿದರೂ ಜನರು ಅನಗತ್ಯವಾಗಿ ಸಂಚಾರ ನಡೆಸುವುದು ಕಂಡು ಬಂದಿರುವುದರಿಂದ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸೋಮವಾರ, ಮಂಗಳವಾರ, ಬುಧವಾರ ರಾಜ್ಯ ಸರ್ಕಾರ ನೀಡಿರುವ ನಿಯಮದಂತೆ ಬೆಳಗ್ಗೆ 6ರಿಂದ 10ರವರೆಗೆ ವಸ್ತುಗಳ ಮಾರಾಟಕ್ಕೆ ಅವಕಾಶ ಇರಲಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗುವುದು. ಮೆಡಿಕಲ್, ಆಸ್ಪತ್ರೆ ಸೇವೆ ಎಂದಿನಂತೆ ಇರಲಿದೆ ಎಂದು ಅವರು ಮಾಹಿತಿ ನೀಡಿದರು.
ಜನರು ದಯವಿಟ್ಟು ಕೋವಿಡ್ ನಿಯಮ ಪಾಲಿಸಬೇಕು. ಅನಗತ್ಯವಾಗಿ ಸಂಚಾರ, ಅನಗತ್ಯವಾಗಿ ಗುಂಪುಗೂಡುವುದನ್ನು ನಿಲ್ಲಿಸಬೇಕು. ಇದೆಲ್ಲಾ ನಿಯಮ ಜನರ ಆರೋಗ್ಯಕ್ಕಾಗಿ ಎಂದು ಸಚಿವರು ಮನವಿ ಮಾಡಿದರು.
ಬೈಕ್ನಲ್ಲಿ ಶವ ಸಾಗಣೆ ಪ್ರಕರಣ : ತನಿಖೆಗೆ ಆದೇಶ, ವರದಿ ನೀಡಲು ಎಸ್ಪಿಗೆ ಗಡುವು : ಬೈಕ್ನಲ್ಲಿ ವೃದ್ಧರೊಬ್ಬರ ಶವ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಇಂದು ಕೋವಿಡ್ ಸಂಬಂಧಿತ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಕೊಳ್ಳೇಗಾಲದ ಅಮಾನವೀಯ ಕಾರ್ಯ ಚರ್ಚೆಗೆ ಬಂದು ಮಂಗಳವಾರ ಮಧ್ಯಾಹ್ನದೊಳಗೆ ತನಿಖೆ ನಡೆಸಿ ಸಾವಿಗೆ ಕಾರಣ ಏನು?, ಯಾಕೆ ಬೈಕ್ನಲ್ಲಿ ಶವ ಸಾಗಿಸಿದರು. ಅದಾದ ನಂತರದ ಬೆಳವಣಿಗೆಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ಎಸ್ಪಿಗೆ ಸಚಿವರು ಗಡುವು ನೀಡಿದ್ದಾರೆ.
ಕಳೆದ ಶನಿವಾರ ಕೊಳ್ಳೇಗಾಲ ತಾಲೂಕಿನ ಟಗರಪುರ ಗ್ರಾಪಂ ವ್ಯಾಪ್ತಿಯ ಆಲಹಳ್ಳಿ ಗ್ರಾಮದಲ್ಲಿ ವೃದ್ಧನೋರ್ವ ಸಹಜವಾಗಿ ಸಾವನ್ನಪ್ಪಿದ್ದರೂ ಕೂಡ ಗ್ರಾಮಸ್ಥರು ಕೊರೊನಾ ಕಾರಣದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಿ ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡಲು ಹಿಂದೇಟು ಹಾಕಿದ್ದರು. ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ನಿರಾಕರಿಸಿದ್ದರು.
ಈ ವಿಚಾರ ತಿಳಿದ ಪಿಎಫ್ಐ ಯುವಕರ ತಂಡ ಆಟೋ, ಆ್ಯಂಬುಲೆನ್ಸ್ ಯಾವುದಕ್ಕೂ ಗ್ರಾಮಸ್ಥರು ಅವಕಾಶ ಕೊಡದಿದ್ದರಿಂದ ಬೈಕ್ ನಲ್ಲಿ ಏಣಿಯಿಟ್ಟು ಶವ ಸಾಗಿಸಿ, ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.