ಚಾಮರಾಜನಗರ: ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಹುತಾತ್ಮರಾಗಿ ಇಂದಿಗೆ 30 ವರ್ಷ ತುಂಬಿದೆ. ವೀರಪ್ಪನ್ ಊರಾದ ಗೋಪಿನಾಥಂನ ಜನತೆಗೆ ಶ್ರೀನಿವಾಸ್ ಈಗಲೂ ದೇವರ ಸ್ವರೂಪ. ಹುತಾತ್ಮ ದಿನ ಹಾಗೂ ಅವರು ಹುಟ್ಟಿದ ಹಬ್ಬ ಬರುತ್ತಿದ್ದಂತೆ ನೆಚ್ಚಿನ ಅಧಿಕಾರಿಯನ್ನು ನೆನೆದು ಇಂದಿಗೂ ಬಿಕ್ಕಳಿಸುತ್ತಾರೆ.
ಅಹಿಂಸಾವಾದಿಯಾಗಿದ್ದ ಪಿ.ಶ್ರೀನಿವಾಸ್ ಮಹಾತ್ಮಾ ಗಾಂಧೀಜಿ, ವಿನೋಬಾ ಭಾವೆ ಪ್ರಭಾವಿತರಾಗಿ ಕಾಡುಗಳ್ಳನನ್ನು ಅಹಿಂಸೆಯಿಂದ ಬದಲಾಯಿಸುತ್ತೇನೆ ಎಂಬ ನಂಬಿಕೆಯೇ ಅವರನ್ನು ಬಲಿ ಪಡೆಯಿತು ಎಂಬುದು ದುರಂತ.
ವೀರಪ್ಪನ್ ಸೆರೆಯಲ್ಲಿಟ್ಟಿದ್ದ ಏಕೈಕ ಅಧಿಕಾರಿ
ದಂತಚೋರ ವೀರಪ್ಪನ್ ಕೇವಲ ಒಂದು ಬಾರಿ ಮಾತ್ರ ಪೊಲೀಸರಿಗೆ ಸೆರೆಸಿಕ್ಕಿದ್ದ. ಬೆಂಗಳೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಳಿಕ ಡಿಸಿಎಫ್ ಶ್ರೀನಿವಾಸ್ ಅವರಿಗೆ ಹಸ್ತಾಂತರವಾಗಿದ್ದ. 1980ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್‌ನನ್ನು ಬಂಧಿಸಿ ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್ನಲ್ಲಿ 3 ದಿನ ವಿಚಾರಣೆಗಿಡಲಾಗಿತ್ತು. ಶ್ರೀನಿವಾಸ್ ರೌಂಡ್ಸ್ಗೆ ಹೋದ ವೇಳೆ ಗೆಸ್ಟ್ ಹೌಸ್ನಿಂದ ಪರಾರಿಯಾದ ವೀರಪ್ಪನ್ ಇನ್ನೆಂದೂ ಪೊಲೀಸರಿಗಾಗಲಿ- ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.
ಸಂಚಿನಿಂದ ಕೊಲೆ
ಶರಣಾಗುತ್ತೇನೆಂದು ಸಂಚು ಮಾಡಿ ಡಿಸಿಎಫ್ ಶ್ರೀನಿವಾಸ್ ಅವರನ್ನು 1991 ನವೆಂಬರ್ 10ರಂದು ಗೋಪಿನಾಥಂನಿಂದ ಅಣತಿ ದೂರದ ನಲ್ಲೂರು ಬಳಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕುತ್ತಾನೆ.
ಅಪ್ಪಟ ಗಾಂಧಿವಾದಿಯಾಗಿದ್ದ ಸಾಹೇಬರು ತಮಗೆ ಮನೆಗಳನ್ನು ಕಟ್ಟಿಸಿಕೊಟ್ಟರು, ಮಾರಿಯಮ್ಮ ದೇಗುಲ ನಿರ್ಮಿಸಿಕೊಟ್ಟಿದ್ದಾರೆ. ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದು, ಗ್ರಾಮದ ದೇವಾಲಯದಲ್ಲಿ ಸಾಹೇಬರಿಗೆ ಪ್ರಥಮ ಪೂಜೆ ಎಂದು ಗೋಪಿನಾಥಂ ಗ್ರಾಮದ ಯುವಕ ಲಕ್ಷಣ್ ಈಟಿವಿ ಭಾರತಕ್ಕೆ ತಿಳಿಸಿದರು.
ಪ್ರತಿ ವರ್ಷವೂ ನ.10ರಂದು ಅವರ ನೆನಪಿನಲ್ಲಿ ಹುತಾತ್ಮ ದಿನಾಚರಣೆ ಆಚರಿಸಲಿದ್ದು, ಕಾಡಿನ ದಾರಿಗೆ ಸಾಹೇಬರ ಹೆಸರಿಡಲಾಗಿದೆ, ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನಿಡಲಾಗಿದೆ. ಗ್ರಾಮದ ಕೆಲ ಯುವಕರು ಗ್ರೀನ್ ವಾರಿಯರ್ಸ್ ಎಂಬ ಸಂಘಟನೆ ಮಾಡಿಕೊಂಡು ಶ್ರೀನಿವಾಸ್ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುವ ಜೊತೆಗೆ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಆಕೆಯ ಪ್ರಿಯಕರನ ತಂದೆಯಿಂದಲೇ ದುಷ್ಕೃತ್ಯ!