ಚಾಮರಾಜನಗರ: ರಾಜ್ಯವಷ್ಟೇ ಅಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತ ಸಂಭವಿಸಿ ಇಂದಿಗೆ 2 ವರ್ಷವಾಗಿದೆ. ಅಂದಿನ ಕಹಿ ಘಟನೆ ಇಂದಿಗೂ ಜನರ ಮನದಲ್ಲಿ ಅಚ್ಚೊತ್ತಿದೆ.
ಈ ಘಟನೆಯಲ್ಲಿ ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದರು. 110 ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡು ಇಂದಿಗೂ ಹಲವರು ಸಂಪೂರ್ಣ ಚೇತರಿಸಿಕೊಂಡಿಲ್ಲ. ಕೆಲವರು ಅಂಗ ವೈಕಲ್ಯತೆಗೂ ತುತ್ತಾಗಿದ್ದಾರೆ.
ಇದನ್ನೂ ಓದಿ: ಯೋಗೀಶ್ ಗೌಡ ಹತ್ಯೆ ಪ್ರಕರಣ : ವಿನಯ್ ಕುಲಕರ್ಣಿ ಭವಿಷ್ಯ ಇಂದು ನಿರ್ಧಾರ!
ಅಂದು ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಗ್ರಾಮಗಳಿಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ನಿವೇಶನ, ಜಮೀನು ಕೊಡಿಸುವ ಭರವಸೆ ನೀಡಿದ್ದರು. ಆದರೆ, ನಿವೇಶನದ ಭರವಸೆ ಈಡೇರಿಕೆ ಹಂತದಲ್ಲಿದ್ದರೂ ಜಮೀನು ನೀಡುವ ಭರವಸೆ ಮಾತ್ರ ಹಾಗೇ ಇದೆ. ಇದರೊಟ್ಟಿಗೆ, ಮಾರ್ಟಳ್ಳಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ಕೂಡ ಇನ್ನೂ ಈಡೇರದಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸಾದ ದುರಂತದ ಬಳಿಕ ಬಾಗಿಲು ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇಗುಲ ಕಳೆದ ತಿಂಗಳಷ್ಟೇ ತೆರೆದು ಪೂಜೆ-ಪುನಸ್ಕಾರ ಆರಂಭಗೊಂಡಿದೆ. ಅನ್ನ ಸಂತರ್ಪಣೆಗೆ ಸದ್ಯದ ಮಟ್ಟಿಗೆ ನಿರ್ಬಂಧ ಹೇರಲಾಗಿದೆ.