ಕೊಳ್ಳೇಗಾಲ:ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಮೀನೊಂದಕ್ಕೆ ಕೆಲಸಕ್ಕೆ ತೆರಳಿದ್ದ ಕೂಲಿ ಕಾರ್ಮಿಕರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ದೊಡ್ಡಿಂದುವಾಡಿ ಗ್ರಾಮದ ಸುರೇಶ್, ಈತನ ಕುಟುಂಬದವರಾದ ಚಿಕ್ಕಮ್ಮ, ಕನ್ಯಾ, ಭಾಗ್ಯ, ಮಂಜುನಾಥ್ ಹಾಗೂ ಕೂಲಿ ಕಾರ್ಮಿರಾದ ಮಹದೇವಮ್ಮ, ಭಾಗ್ಯ, ರಾಜಮ್ಮ, ಚಿಕ್ಕಮ್ಮ, ದೊಡ್ಡಮ್ಮ, ರಾಜಮ್ಮ, ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರು.
ನಿನ್ನೆ ಸುರೇಶ್ ಎಂಬುವರ ಜಮೀನಿಗೆ ತೆರಳಿದ್ದ ಕೂಲಿ ಕಾರ್ಮಿಕರು ಮಧ್ಯಾಹ್ನದ ಹೊತ್ತಿನ ಊಟಕ್ಕೆ ಮುದ್ದೆ, ಅನ್ನ, ಉರುಳಿ ಸಂಬಾರ್ ತಿಂದಿದ್ದಾರೆ ಎನ್ನಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ 6 ಮಂದಿ ಕಾರ್ಮಿಕರಿಗೆ ತಡರಾತ್ರಿ ವಾಂತಿ, ಭೇದಿ ಕಾಣಿಸಿಕೊಂಡಿದೆ.
ಇನ್ನೂ ಜಮೀನಿನ ಮಾಲೀಕ ಸುರೇಶ್ ಸೇರಿದಂತೆ ಕುಟುಂಬದವರಾದ 4 ಮಂದಿ ಈ ಊಟವನ್ನೇ ಸೇವಿಸಿದ್ದು ಅಸ್ವಸ್ಥಗೊಂಡು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾಗದ ಹಿನ್ನೆಲೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ 11 ಮಂದಿ ಅಸ್ವಸ್ಥರನ್ನು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿದ ಗ್ರಾಮಾಂತರ ಠಾಣಾ ಪೊಲೀಸರು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.