ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ತೇಜಸ್ವಿ ಸೂರ್ಯ ರಾಜ್ಯದ ಅತಿ ಕಿರಿಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಜಿ.ಎಸ್.ಬಸವರಾಜು ಅತಿ ಹಿರಿಯ ಸಂಸದರಾಗಿದ್ದಾರೆ. ಇಬ್ಬರೂ ಕೂಡ ಬಿಜೆಪಿಯವರು ಎನ್ನುವುದು ವಿಶೇಷ.
ಹೌದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ ರಾಜ್ಯದ ಅತಿ ಕಿರಿಯ ಸಂಸದರಾಗಿದ್ದಾರೆ. 1990ರ ನವೆಂಬರ್ 16 ರಂದು ಜನಿಸಿರುವ ತೇಜಸ್ವಿ ಸೂರ್ಯ, ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ ಸಂಸತ್ ಪ್ರವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಹಾಸನದಿಂದ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಕೂಡ ಕಿರಿಯ ಸಂಸದರ ಸಾಲಿನಲ್ಲಿ ತೇಜಸ್ವಿ ಸೂರ್ಯ ಅವರ ಪಕ್ಕದಲ್ಲೇ ನಿಲ್ಲಲಿದ್ದಾರೆ.1990ರ ಆಗಸ್ಟ್ 5 ರಂದು ಪ್ರಜ್ವಲ್ ಜನಿಸಿದ್ದು, ಇಬ್ಬರಿಗೂ 28 ವರ್ಷವಾಗಿದೆ. ಆದರೆ ತೇಜಸ್ವಿ ಸೂರ್ಯ ಪ್ರಜ್ವಲ್ ರೇವಣ್ಣರಿಗಿಂತಲೂ 3 ತಿಂಗಳು ಚಿಕ್ಕವರು.
ತುಮಕೂರಿನ ಜಿ.ಎಸ್.ಬಸವರಾಜು ರಾಜ್ಯದ ಅತಿ ಹಿರಿಯ ಸಂಸದರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿರುವ ಬಸವರಾಜ್ 1941ರ ಮೇ 4ರಂದು ಜನಿಸಿದ್ದು, 77 ವರ್ಷ ವಯಸ್ಸಿನವರಾಗಿದ್ದಾರೆ. ದೇವೇಗೌಡರು ಪರಾಭವಗೊಂಡ ಕಾರಣ ಬಸವರಾಜ್ ರಾಜ್ಯದ ಅತಿ ಹಿರಿಯ ಸಂಸದರಾಗಿದ್ದಾರೆ.
1984, 89, 99ರಲ್ಲಿ ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆ ಆಗಿದ್ದ ಅವರು ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ 2009ರಲ್ಲಿ ಸಂಸದರಾಗಿದ್ದರು. ಒಟ್ಟಾರೆಯಾಗಿ 5ನೇ ಬಾರಿ ಸಂಸದರಾಗುತ್ತಿದ್ದಾರೆ.