ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಏರುವ ಮುನ್ನವೇ, ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡುವ ಮೊದಲೇ ಹಲವು ಕ್ಷೇತ್ರಗಳು ಹೈ ವೋಲ್ಟೇಜ್ ಕ್ಷೇತ್ರಗಳಾಗಿ ಹೊರ ಹೊಮ್ಮಿವೆ.
ಹೌದು, ಪ್ರಬಲ ಪೈಪೋಟಿಯಿಂದಾಗಿ, ಗೆಲ್ಲಲೇ ಬೇಕೆನ್ನುವ ಹಠದಿಂದಾಗಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಮಂಡ್ಯ, ಕಲಬುರಗಿ, ಹಾಸನ, ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಹಾವೇರಿ, ಚಿಕ್ಕೋಡಿ, ಕೋಲಾರ, ಉಡುಪಿ - ಚಿಕ್ಕಮಗಳೂರು ಹೈ ವೋಲ್ಟೇಜ್ ಕಣಗಳಾಗಿ ಮಾರ್ಪಟ್ಟಿವೆ.
ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಇನ್ನೂ ಅಧಿಕೃತವಾಗಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿಲ್ಲ. ಆಗಲೇ ಹಲವು ಅಭ್ಯರ್ಥಿಗಳ ಬಿರುಸಿನ ಪ್ರಚಾರದಿಂದಾಗಿ ಲೋಕಸಭೆ ಕ್ಷೇತ್ರಗಳಲ್ಲಿ ಬೇಸಿಗೆಯ ಬಿರು ಬಿಸಿಲಿಗಿಂತಲೂ ಚುನಾವಣೆ ಕಾವು ಹೆಚ್ಚಾಗಿದೆ.
ಮೊದಲನೇ ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯ:
ರಾಜ್ಯದಲ್ಲಿ ಮಂಡ್ಯ ಮೊದಲ ಹೈ ವೋಲ್ಟೇಜ್ ಕ್ಷೇತ್ರವೆನಿಸಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದಾಗಿ ಮಂಡ್ಯದ ಕಣ ರಣರಂಗವಾಗಿದೆ. ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಮಂಡ್ಯದಲ್ಲಿ ಚುನಾವಣೆ ಕಾವು ಮೂಡಿತ್ತು. ಸುಮಲತಾ ಸ್ಪರ್ಧೆ ಬಗ್ಗೆ ಜೆಡಿಎಸ್ ಮುಖಂಡರು ನೀಡಿದ ಅವಹೇಳನಕಾರಿ ಹೇಳಿಕೆಗಳು, ಸುಮಲತಾ ಪರವಾಗಿ ಜನಪ್ರಿಯ ತಾರೆಗಳಾದ ಯಶ್ ಮತ್ತು ದರ್ಶನ್ ಪ್ರಚಾರಕ್ಕಿಳಿದಿರುವುದು ಮಂಡ್ಯ ಕ್ಷೇತ್ರವನ್ನು ಹೈ ವೋಲ್ಟೇಜ್ ಕ್ಷೇತ್ರವನ್ನಾಗಿ ಮಾಡಿದೆ.
ಎರಡನೇ ಹೈ ವೋಲ್ಟೇಜ್ ಕ್ಷೇತ್ರ ಕಲಬುರಗಿ:
ಹೈದರಾಬಾದ್ ಕರ್ನಾಟಕದ ಕಲಬುರಗಿ ರಾಜ್ಯದಲ್ಲಿ ಎರಡನೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ. ಚುನಾವಣೆಯಲ್ಲಿ ಅತಂತ್ರ ಲೋಕಸಭೆ ರಚನೆಯಾದರೆ, ಅವಕಾಶ ಸಿಕ್ಕರೆ ಪ್ರಧಾನಿ ಪದವಿ ಮೇಲೆ ಕಣ್ಣಿಟ್ಟಿರುವ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ.
ಹೇಗಾದರು ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸೂಕ್ತ ಅಭ್ಯರ್ಥಿ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ಡಾ. ಉಮೇಶ ಜಾಧವ್ ಅವರನ್ನು ಆಪರೇಶನ್ ಕಮಲಕ್ಕೆ ಒಳಪಡಿಸಿ ಶಾಸಕ ಸ್ಥಾನಕ್ಕೆ ಅವರಿಂದ ರಾಜೀನಾಮೆ ಕೊಡಿಸಿ ಖರ್ಗೆ ವಿರುದ್ಧ ಕಣಕ್ಕೆ ಇಳಿಸುತ್ತಿರುವುದು ಕಲಬುರಗಿ ಕ್ಷೇತ್ರದ ಚುನಾವಣೆಯ ಗಂಭೀರತೆಯನ್ನು ಹೆಚ್ಚಿಸಿದೆ.
ಶಿವಮೊಗ್ಗ, ಹಾಸನ ಕ್ಷೇತ್ರಗಳೂ ಸಹ ಹೈ ವೋಲ್ಟೇಜ್:
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ದಿ. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರ ಸ್ಪರ್ಧೆಯಿಂದಾಗಿ ಶಿವಮೊಗ್ಗ ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿದೆ. ಈ ಬಾರಿ ಯಡಿಯೂರಪ್ಪನವರ ಪುತ್ ಬಿ.ವೈ.ರಾಘವೇಂದ್ರ ಅವರನ್ನು ಮಣಿಸಲೇಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರನ್ನು ಚುನಾವಣೆಗೆ ನಿಲ್ಲಿಸಿರುವುದು ಮಲೆನಾಡಿನ ಜಿಲ್ಲೆ ಶಿವಮೊಗ್ಗದ ಚುನಾವಣೆ ಕಾವನ್ನು ಹೆಚ್ಚಿಸಿದೆ.
ಮಾಜಿ ಪ್ರಧಾನಿ ದೇವೇಗೌಡರ ಅಚ್ಚುಮೆಚ್ಚಿನ ಮೊಮ್ಮಗ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆಯಿಂದಾಗಿ ಹಾಸನದ ಚುನಾವಣೆ ಸಹ ಕುತೂಹಲ ಮೂಡಿಸಿದೆ. ಹಾಸನದಲ್ಲಿ ದೇವೇಗೌಡರ ಕುಟುಂಬವನ್ನು ಎದುರಿಸಲು ಸೂಕ್ತ ಅಭ್ಯರ್ಥಿ ಇಲ್ಲದೆ ಬಿಜೆಪಿಯು ಕಾಂಗ್ರೆಸ್ ಪಕ್ಚದ ಮಾಜಿ ಸಚಿವ ಎ.ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ದೇವೇಗೌಡರ ಮೊಮ್ಮಗನ ವಿರುದ್ಧ ಕಣಕ್ಕಿಳಿಸುತ್ತಿದೆ. ಹೀಗಾಗಿ ಹಾಸನ ಸಹ ರಾಜಕೀಯವಾಗಿ ಎಲ್ಲರ ಗಮನ ಸೆಳೆದಿದ್ದು, ಅಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಉಳಿದಂತೆ ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಾಮರಾಜನಗರ, ಹಾವೇರಿ, ಉಡುಪಿ- ಚಿಕ್ಕಮಗಳೂರು, ಚಿಕ್ಕೋಡಿ ಸಹ ಹೈ ವೋಲ್ಟೇಜ್ ಕಣಗಳು ಆಗಿದ್ದು, ಕಾಂಗ್ರೆಸ್ , ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಸ್ಫರ್ಧೆ ಉಂಟಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಹೊರಹೊಮ್ಮುವ ಎಲ್ಲಾ ಮುನ್ಸೂಚನೆಗಳು ದೊರೆಯುತ್ತಿವೆ. ಬೆಂಗಳೂರು ಉತ್ತರದಿಂದ ದೇವೇಗೌಡರು ಕಣಕ್ಕೆ ಇಳಿದರೆ ಬಿಜೆಪಿಯ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟು ದೇಶದ ಗಮನ ಸೆಳೆಯಲಿದೆ.
ಒಂದೊಮ್ಮೆ ದೇವೇಗೌಡರು ತುಮಕೂರಿನಿಂದ ಚುನಾವಣೆಗೆ ನಿಂತರೆ ಆ ಕ್ಷೇತ್ರ ಸಹ ಪೈಪೋಟಿಯ ಕಣವಾಗಲಿದೆ. ಅಲ್ಲಿ ದೇವೇಗೌಡರನ್ನ ಎದುರಿಸಲು ಬಿಜೆಪಿಯು ಪ್ರಬಲ ಅಭ್ಯರ್ಥಿಯನ್ನಾಗಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನ ನಿಲ್ಲಿಸಿ ಕಣವನ್ನು ರಂಗೇರಿಸಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಘೋಷಿಸಿದ ನಂತರ ಕೆಲವು ಕ್ಷೇತ್ರಗಳ ಚುನಾವಣೆ ಕಾವು ಮತ್ತಷ್ಟು ಹೆಚ್ಚಲಿದೆ. ಹೈ ವೋಲ್ಟೇಜ್ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗಲಿದೆ.