ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಕೈದಿಗಳು ಅಸಹಜ ಸಾವು ಹೊಂದಿದ ಪಟ್ಟಿ ಹಾಗೂ ಜೈಲಿನಲ್ಲಿರುವ ಕೈದಿಗಳಿಗೆ ನೀಡುವ ಸೌಲಭ್ಯದ ಕುರಿತು ಸಂಪೂರ್ಣ ವರದಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾ. ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠವು ಸರ್ಕಾರಿ ವಕೀಲರಿಗೆ ಜೈಲಿನ ಕೈದಿಗಳ ಹಿತದೃಷ್ಟಿಯಿಂದ ಕೈಗೊಂಡಿರುವ ಮೂಲಭೂತ ಸೌಕರ್ಯಗಳ ಕುರಿತು ವಿವರವಾದ ವರದಿ ಸಲ್ಲಿಸಲು ಸೂಚನೆ ನೀಡಿತ್ತು. ಇಂದು ವಕೀಲರು ಜೈಲಿನ ವಾಸ್ತವ ಸ್ಥಿತಿ ಕುರಿತು ವರದಿ ನೀಡಿದರು. ಈ ವೇಳೆ ಜೈಲುಗಳಲ್ಲಿರುವ ಕೈದಿಗಳ ಪೈಕಿ ಮಾನಸಿಕ ರೋಗದಿಂದ ಬಳಲುತ್ತಿರುವ ಕೈದಿಗಳನ್ನು ಪತ್ತೆ ಹಚ್ಚಬೇಕು. ಜೈಲಿನಲ್ಲಿ ಮಾನಸಿಕ ಆರೋಗ್ಯ ವಾರ್ಡ್ ರಚನೆ ಮಾಡಬೇಕು ಹಾಗೂ ಮನೋ ವೈದ್ಯರ ನೇಮಕ ಮಾಡಿ ಒಂದು ತಿಂಗಳಿನಲ್ಲಿ ಸಮಗ್ರ ವರದಿ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.