ಬೆಂಗಳೂರು: ಹತ್ತು ದಿನದ ಹಿಂದೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರೂ, ಇದುವರೆಗೆ ಖಾತೆ ಹಂಚಿಕೆಯಾಗದೇ ಬೇಸರದಿಂದ ಕುಳಿತಿರುವ ಇಬ್ಬರು ನೂತನ ಸಚಿವರಿಗೆ ನಾಳೆ ಖಾತೆ ಭಾಗ್ಯ ಸಿಗುವುದು ಬಹುತೇಕ ಖಚಿತವಾಗಿದೆ.
ಸಿಎಂ ಎಚ್.ಡಿ ಕುಮಾರಸ್ವಾಮಿ ಇಂದು ಅಥವಾ ನಾಳೆ ಬೆಳಗ್ಗೆ ಸಚಿವರ ಖಾತೆ ಪಟ್ಟಿ ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಇದಾದ ಬಳಿಕ ಸರ್ಕಾರ ಕೂಡಲೇ ಖಾತೆ ವಿವರ ಘೋಷಣೆ ಮಾಡಲಿದೆ. ನಾಳೆ ಈ ಖಾತೆಗಳ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದ್ದು, ಸಚಿವರ ಬೇಗುದಿ ಶಮನಗೊಳ್ಳುವ ಸಾಧ್ಯತೆ ಇದೆ.
ತಮಗೆ ಬೇಕಾದ ಖಾತೆ ನೀಡುವಂತೆ ಆರ್. ಶಂಕರ್ ಹಾಗೂ ಎಚ್. ನಾಗೇಶ್ ಪಟ್ಟು ಹಿಡಿದಿದ್ದರು. ಇದರಿಂದ ಹಂಚಿಕೆ ವಿಳಂಬವಾಗಿತ್ತು. ಇದೀಗ ಸಚಿವರು ಪಟ್ಟು ಸಡಿಲಿಸಿದ್ದು, ಕೊಟ್ಟ ಖಾತೆ ನಿಭಾಯಿಸಲು ಸಚಿವರು ಒಪ್ಪಿದ್ದಾರೆ. ಶಂಕರ್‌ಗೆ ಪೌರಾಡಳಿತ ಹಾಗೂ ನಾಗೇಶ್ಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಿಗುವ ಸಾಧ್ಯತೆ ಹೆಚ್ಚಿದೆ.
ಇದುವರೆಗೂ ಸಿಎಂ ಬಳಿ ಇರುವ ಅಬಕಾರಿ ಖಾತೆಗೆ ನಾಗೇಶ್ ಹಾಗೂ ಡಿಕೆಶಿ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಖಾತೆ, ಇಲ್ಲವೇ ತಾವು ಆರು ತಿಂಗಳ ಹಿಂದೆ ನಿಭಾಯಿಸಿದ್ದ ಅರಣ್ಯ ಖಾತೆಯನ್ನು ಬಯಸಿದ್ದರು ಎನ್ನಲಾಗಿದೆ. ಇದರಿಂದ ಎದುರಾದ ಗೊಂದಲಕ್ಕೆ ಖಾತೆ ಹಂಚಿಕೆ ಹಾಗೂ ಘೋಷಣೆ ವಿಳಂಬವಾಗಿತ್ತು. ಮೂಲಗಳ ಪ್ರಕಾರ, ನೂತನ ಸಚಿವರಿಗೆ ಪ್ರಮಾಣವಚನಕ್ಕೆ ಮುನ್ನವೇ ಇಂಥದ್ದೇ ಖಾತೆ ನೀಡಬೇಕೆಂಬ ತೀರ್ಮಾನ ಆಗಿ ಹೋಗಿತ್ತು. ಆದ್ರೆ, ಅವರು ಕ್ಯಾತೆ ತೆಗೆದಿದ್ದರಿಂದ ವಿಳಂಬವಾಗಿದೆ ಎಂಬ ಮಾತು ಕೇಳಿಬಂದಿದೆ.
ರಾಜ್ಯಪಾಲ ವಜುಭಾಯಿ ವಾಲಾ ರಾಜಧಾನಿಯಲ್ಲಿ ಇರಲಿಲ್ಲ ಎನ್ನುವ ಕಾರಣದಿಂದ ಖಾತೆ ಹಂಚಿಕೆ ವಿಳಂಬವಾಗಿತ್ತು. ವಾಲಾ ಅವರು ನಾಳೆ ನಗರಕ್ಕೆ ಆಗಮಿಸಲಿದ್ದು, ಬಂದ ತಕ್ಷಣ ಹೊಸ ಸಚಿವರ ಖಾತೆಯ ಪಟ್ಟಿಗೆ ಸಹಿ ಮಾಡಿ ಪ್ರಕಟಣೆಗೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.