ಬೆಂಗಳೂರು: ಯುಗಾದಿ ಸಂಭ್ರಮದ ನಡುವೆಯೂ ಲೋಕಸಭಾ ಚುನಾವಣಾ ಪ್ರಚಾರ ಭರಾಟೆಯಿಂದ ನಡೆಯುತ್ತಿದ್ದು, ಚುನಾವಣಾ ಆಯೋಗವೂ ಹಬ್ಬವನ್ನು ಬದಿಗೊತ್ತಿ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿದೆ. ಆಮಿಷ, ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಹೌದು, ಇಡೀ ರಾಜ್ಯವೇ ಇಂದು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದು, ಸರ್ಕಾರಿ ಕಚೇರಿಗಳಿಗೆ ರಜೆ ಇದ್ದರೂ ಕೂಡ ಚುನಾವಣಾ ಆಯೋಗದ ಕಚೇರಿ ಮಾತ್ರ ಎಂದಿನಂತೆಯೇ ತೆರೆದಿತ್ತು. ಆಯೋಗದ ಸಿಬ್ಬಂದಿ ಪ್ರತಿದಿನದಂತೆಯೇ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸೇರಿದಂತೆ ಚುನಾವಣಾ ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿಯೂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದರು. ರಾಜ್ಯಾದ್ಯಂತ ನಡೆಯುತ್ತಿರುವ ಚುನಾವಣಾ ಪ್ರಚಾರದ ವಿದ್ಯಮಾನಗಳು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇತ್ಯಾದಿಗಳ ಕುರಿತು ಇಂದೂ ಕೂಡ ಕರ್ತವ್ಯ ನಿರ್ವಹಿಸಿದರು.
ಚುನಾವಣಾ ಕರ್ತವ್ಯ ಮುಗಿಯುವವರೆಗೂ ಭಾನುವಾರವೂ ಸೇರಿದಂತೆ ಎಲ್ಲಾ ಸರ್ಕಾರಿ ರಜೆಗಳಂದು ಕೂಡ ಚುನಾವಣಾ ಆಯೋಗದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ನಾಳೆಯೂ ಕೂಡ ಚುನಾವಣಾ ಆಯೋಗದ ಕಚೇರಿ ಎಂದಿನಂತೆ ತೆರೆದಿರುತ್ತದಂತೆ.
ಚುನಾವಣಾ ಅಕ್ರಮದ ದೂರ ನೀಡಲು, ಮಾಹಿತಿ ಪಡೆಯಲು ರಜೆಯನ್ನು ಲೆಕ್ಕಿಸದೇ ಯಾವಾಗ ಬೇಕಾದರೂ ಆಯೋಗದ ಕಚೇರಿಗೆ ಕಚೇರಿ ಸಮಯದಲ್ಲಿ ಭೇಟಿ ನೀಡಬಹುದಾಗಿದೆ.