ಬೆಂಗಳೂರು: ಖ್ಯಾತ ಬರಹಗಾರ, ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು ಗಿರೀಶ್ ಕಾರ್ನಡ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕಾರ್ನಾಡರ ಬರವಣಿಗೆ, ಅವರ ಹೋರಾಟದ ಬಗ್ಗೆ ಈಟಿವಿ ಭಾರತ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಗಿರೀಶ್ ಕಾರ್ನಾಡ್ ನಿಧನ ತುಂಬಾ ವಿಷಾದಕರ ಸಂಗತಿ, ಗಿರೀಶ್ ಕಾರ್ನಾಡವರ ವ್ಯಕ್ತಿತ್ವದಲ್ಲಿ ಎರಡು ನೆಲೆಗಳನ್ನು ನಾವು ನೋಡಬಹುದು, ಒಂದು ಸಾಂಸೃತಿಕ ನೆಲೆ ಹಾಗೂ ಸಾರ್ವಜನಿಕ ನೆಲೆ. ಅವರ ಸಾರ್ವಜನಿಕ ನೆಲೆಯಲ್ಲಿ ಮುಖಾಮುಖಿ ಗುಣವಿದ್ದರೆ, ಸಾಂಸ್ಕೃತಿಕ ನೆಲೆಯಲ್ಲಿ ಅನುಸಂಧಾನ ಗುಣವಿತ್ತು. ಇದಕ್ಕೆ ಸಾಕ್ಷಿಯಾಗಿ ಅವರ ಅನೇಕ ನಾಟಕಗಳು ನಮ್ಮ ಕಣ್ಮುಂದೆ ಇವೆ. ಕಾರ್ನಾಡ್ ಅವರು ಚರಿತ್ರೆ ಹಾಗೂ ಪುರಾಣದ ವಸ್ತುಗಳನ್ನು ತೆಗೆದುಕೊಂಡು, ಸಮಕಾಲಿನ ಸಂದರ್ಭಕ್ಕೆ ಪ್ರಸ್ತುತವಾದ ವಿಚಾರಧಾರೆಯ ಮುಖಾಂತರ ಪುನರ್ ವ್ಯಾಖ್ಯಾನ ಮಾಡಿದ ರೀತಿ ತುಂಬಾ ವಿಶೇಷವಾದದ್ದು. ಪುನರ್ ವ್ಯಾಖ್ಯಾನದ ಮುಖಾಂತರ ಚರಿತ್ರೆ ಹಾಗೂ ಪುರಾಣದ ವಸ್ತುಗಳನ್ನು ಪುನರ್ ಸೃಷ್ಟಿಸಿದ ಕ್ರಮ ಕಾರ್ನಾಡರು ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟಂತಹ ದೊಡ್ಡ ಕೊಡುಗೆ.
ಕಾರ್ನಾಡರ ಹಯವದನ, ಇಟ್ಟಿನಹುಂಜ, ಯಯಾತಿ, ತುಘಲಕ್, ತಲೆತಂಡ ಹಾಗೂ ಟಿಪ್ಪುವಿನ ಕನಸುಗಳು ನಾಟಕಗಳನ್ನು ಪ್ರಸ್ತುತ ಸಮಾಜದಲ್ಲಿ ಚರಿತ್ರೆ ಹಾಗೂ ಪುರಾಣಗಳ ಅಪವ್ಯಾಖ್ಯಾನ ಮಾಡಿ ಸಲ್ಲದ ರಾಜಕೀಯಕ್ಕೆ ಬಳಸಲಾಗುತ್ತಿದೆ. ಕಾರ್ನಡರು ಯಾವುದೇ ವಿಷಯದ ಬಗ್ಗೆ ದಿಟ್ಟವಾಗಿ ಪ್ರತಿಕ್ರಿಯೆ ತೋರುತ್ತಿದ್ದರು. ಅವರ ಪ್ರತಿಕ್ರಿಯೆಗಳು ಬೇರೆಯವರಿಗೆ ಇಷ್ಟವಾಗುತ್ತೊ ಇಲ್ಲವೋ ಎಂಬುದರ ಬಗ್ಗೆ ಕಾರ್ನಡರು ಯೋಚಿಸ್ತಿರಲಿಲ್ಲ. ಸಮಾಜ ಕಾರ್ನಾಡರ ಕೆಲವು ವಿಚಾರಗಳನ್ನು ಒಪ್ಪದೆ ಇರಬಹುದು, ಆದರೆ ಅವರು ಏನು ಹೇಳುತ್ತಿದ್ದರೋ ಅದಕ್ಕೆ ಪ್ರಾಮಾಣಿಕವಾಗಿದ್ದರು. ಇದರ ಹಿಂದೆ ಒಂದು ವಿಚಾರಧಾರೆ ಇತ್ತು, ನಮ್ಮ ದೇಶದಲ್ಲಿ ಇರುವಂತ ಪ್ರತಿಗಾಮಿ ಮೌಲ್ಯಗಳನ್ನ ಮತ್ತು ಧಾರ್ಮಿಕ ಮೂಲಭೂತವಾದಿ ವಿಚಾರಗಳನ್ನು ವಿರೋಧಿಸುತ್ತಿದ್ದರು. ಹೀಗಾಗಿ ಅವರ ನಿಲುವುಗಳು ವಿವಾದಕ್ಕೆ ಕಾರಣವಾದವು, ಅಲ್ಲದೆ ಆರೋಗ್ಯಕರ ವಾಗ್ವಾದಕ್ಕೆ ಕಾರಣವಾದವು.
ಕಾರ್ನಾಡರು ಚಿತ್ರರಂಗಕ್ಕೂ ಅಪಾರ ಕೊಡುಗೆ ನೀಡಿದ್ದು, ಬಿವಿ ಕಾರಂತರ ಜೊತೆ ಸೇರಿ ವಂಶ ವೃಕ್ಷ ಎಂಬ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ರು. ಅನಂತರ ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶನ ಮಾಡಿದ್ರು. ಅಲ್ಲದೆ ಹಿಮದಿಯಲ್ಲಿ ಉತ್ಸವ ಎಂಬ ಸಿನಿಮಾ ನಿರ್ದೇಶನ ಮಾಡಿದ್ರು. ನಿರ್ದೇಶನ ಮಾಡಿದಕ್ಕಿಂತ ಹೆಚ್ಚಾಗಿ ನಟನೆ ಮಾಡಿದ್ದಾರೆ. ಅವರದೇ ಆದ ಒಂದು ಅಭಿನಯ ಶೈಲಿ ಇತ್ತು ಹಾಗೂ ಅವರು ನಿರ್ದೇಶನ ಮಾಡಿದ ಎಲ್ಲಾ ಚಿತ್ರಗಳು ಸದಾಭಿರುಚಿಯ, ಕಲಾತ್ಮಕ ಮೌಲ್ಯಗಳು ಇರುವಂತಹ ಚಿತ್ರಗಳಾಗಿದ್ದವು.
ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಡ ನಾಟಕ ಸಾಹಿತ್ಯ ,ಕನ್ನಡ ರಂಗಭೂಮಿ, ಕನ್ನಡ ಚಿತ್ರರಂಗಕ್ಕೆ ಕೊಡುಗೆ ಕೊಡುತ್ತಾ, ಸಾರ್ವಜನಿಕ ವಲಯದಲ್ಲಿ ಕ್ರಿಯಾಶೀಲರಾಗಿದಂತಹ ನಮ್ಮ ನಡುವಿನ ಒಬ್ಬ ದೊಡ್ಡ ಸಾಧಕನನ್ನು ಕಳೆದುಕೊಂಡಿದ್ದೀವಿ ಎಂದು ಹೇಳಿ ಕಾರ್ನಾಡರ ನಿಧನಕ್ಕೆ ಬರಗೂರು ರಾಮಚಂದ್ರಪ್ಪನವರು ಸಂತಾಪ ಸೂಚಿಸಿದರು.