ಬೆಂಗಳೂರು : ಗ್ರಾಮ ವಾಸ್ತವ್ಯದ ಪೂರ್ವಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ.ಗ್ರಾಮದ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಬಾರಿ ಗ್ರಾಮವಾಸ್ತವ್ಯಕ್ಕೆ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ.
ಮೊದಲಿಗೆ ಜೂನ್ 21 ಮತ್ತು 22 ರಂದು ರಾಯಚೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು. 'ಸುವರ್ಣ ಗ್ರಾಮ ಯೋಜನೆ' ಅತ್ಯಂತ ನಿರೀಕ್ಷಿತ ಯೋಜನೆಯಾಗಿ ರೂಪುಗೊಂಡಿತ್ತು. ಆದರೆ ನನ್ನ ಅವಧಿಯ ನಂತರ ನನ್ನ ಆಶಯಕ್ಕೆ ಅನುಗುಣವಾಗಿ 'ಸುವರ್ಣ ಗ್ರಾಮ ಯೋಜನೆ' ರೂಪುಗೊಳ್ಳಲಿಲ್ಲ. ಅದಕ್ಕೆ ಮತ್ತೆ ಆ ಯೋಜನೆಗೆ ಮರುಜೀವ ಕೊಡಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಗ್ರಾಮವಾಸ್ತವ್ಯವನ್ನು ಪುನರಾರಂಭಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮ ಇದಾಗಬೇಕು. ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯದ ಮೂಲಕ ಈಗಾಗಲೇ ಜನಪ್ರಿಯರಾಗಿದ್ದಾರೆ. ಹೈದರಾಬಾದ್ ಕರ್ನಾಟಕದ ಮೂಲಕ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವುದು ಸ್ವಾಗತಾರ್ಹ ಎಂದರು.
ಈ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಏರ್ಪಡಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುವ ಗ್ರಾಮದ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಗ್ರಾಮ ವಾಸ್ತವ್ಯ ಒಂದು ವಿನೂತನ ಕಾರ್ಯಕ್ರಮ. ಜನರೊಂದಿಗೆ ನೇರ ಸಂಪರ್ಕಕ್ಕೆ ಇದು ಸಹಾಯಕವಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಹಲವು ಯೋಜನೆಗಳು ರೂಪುಗೊಂಡಿದ್ದವು. ಜನರ ಆಶೋತ್ತರಗಳನ್ನು ಈಡೇರಿಸಲು ಜಿಲ್ಲಾಡಳಿತ ಸಜ್ಜಾಗಬೇಕು ಎಂದು ನುಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್. ಸುಬ್ರಹ್ಮಣ್ಯ, ಹಿರಿಯ ಅಧಿಕಾರಿಗಳಾದ ಡಾ. ಇ.ವಿ ರಮಣರೆಡ್ಡಿ, ಡಾ. ರಜನೀಶ್ ಗೋಯಲ್, ಎಲ್.ಕೆ. ಅತೀಕ್, ರಾಕೇಶ್ ಸಿಂಗ್, ಕುಮಾರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.