ಬೆಂಗಳೂರು: 3600 ಎಕರೆ ಜಮೀನನ್ನು ಜಿಂದಾಲ್ಗೆ ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಣಯ ಹಾಗೂ ಶಾಸಕರ ಅನುದಾನ ತಾರತಮ್ಯದ ವಿರುದ್ಧ ಮೂರು ದಿನಗಳ ಕಾಲ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಶಾಸಕಾಂಗ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಭಾಗಿಯಾಗಿದ್ದರು.
ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ನಿರ್ಣಯ ಕೈಗೊಂಡ ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ರೂಪುರೇಷೆಗಳ ಬಗ್ಗೆ, ಬರಪೀಡಿತ ಪ್ರದೇಶಗಳ ಪ್ರವಾಸದ ಬದಲು ಗ್ರಾಮ ವಾಸ್ತವ್ಯ ಮಾಡಲು ಹೊರಟ ಸಿಎಂ ವಿರುದ್ಧ ಹೋರಾಟ ನಡೆಸುವ ಹಾಗೂ ಬರ ಅಧ್ಯಯನಕ್ಕೆ ಬಿಜೆಪಿ ತಂಡಗಳು ತೆರಳುವ ಕುರಿತು ಚರ್ಚೆ ನಡೆಸಲಾಯಿತು. ಆಪರೇಷನ್ ಕಮಲದ ವಿಷಯವೂ ಚರ್ಚಿತವಾಯಿತು. ನಂತರ ಸರ್ಕಾರದ ವಿರುದ್ಧ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಬಿಜೆಪಿ ಶಾಸಕಾಂಗ ಸಭೆ ಬಳಿಕ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯದಲ್ಲಿ ಭೀಕರ ಬರವಿದೆ. ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ವಿನಂತಿ ಹಾಗೂ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಜೂನ್ 7, 8 ಹಾಗೂ 9 ರಂದು ಉತ್ತರ ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದಾರೆ. ಬಾದಾಮಿ, ಕೊಪ್ಪಳ, ಲಿಂಗಸೂರು, ಯಾದಗಿರಿ, ಗುರುಮಿಟ್ಕಲ್ನಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ ಎಂದರು.
3600 ಎಕರೆ ಜಮೀನನ್ನು ಜಿಂದಾಲ್ಗೆ ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಣಯದ ವಿರುದ್ದ, ಶಾಸಕರ ಅನುದಾನ ತಾರತಮ್ಯದ ವಿರುದ್ದ ಜೂನ್ 13,14 ಹಾಗೂ 15 ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಲೋಕಸಭಾ ಅಧಿವೇಶನದ ನಂತರ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಂಸದರು, ಶಾಸಕರು ಮತ್ತು ಎಂಎಲ್ಸಿಗಳ ಸಭೆ ಕರೆಯಲಾಗುತ್ತದೆ. ಕರ್ನಾಟಕದ ಅಭಿವೃದ್ದಿಯ ನೀಲನಕ್ಷೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ರಾಜ್ಯ ಸರ್ಕಾರದ ಸಚಿವರ ಕಮೀಷನ್ ದಂಧೆ, ವರ್ಗಾವಣೆ ದಂಧೆ ಹಾಗೂ ಅನುದಾನ ತಾರತಮ್ಯದ ವಿರುದ್ಧ ಹೋರಾಟ ರೂಪಿಸಲು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಂಘಟನಾತ್ಮಕ ವಿಷಯಕ್ಕೆ ಸಂಬಂಧಿಸಿದ್ದು, ಕೇಂದ್ರ ಹಾಗೂ ಉಳಿದೆಲ್ಲ ರಾಜ್ಯಗಳಲ್ಲಿ ಆದಂತೆ ಇಲ್ಲೂ ಸಹ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.