ಬೆಂಗಳೂರು: ಸಾಮೂಹಿಕ ಕೃಷಿ ಪದ್ಧತಿ ಜಾರಿಗೆ ತರಲು ಉದ್ದೇಶಿಸಿದ್ದು, ಇದಕ್ಕಾಗಿ ಹೊಸ ಕಾಯ್ದೆ ರೂಪಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್ ಹೆಚ್ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಕಾಯ್ದೆ ಜಾರಿಗೆ ತರುವ ಸಂಬಂಧ ಸಂಪುಟ ಉಪಸಮಿತಿಯಲ್ಲಿ ಅದರ ಸಾಧಕ ಬಾಧಕಗಳನ್ನು ಚರ್ಚಿಸಲಾಗುವುದು. ಇದರಲ್ಲಿ ಭದ್ರತೆ ನೀಡುವುದು ಸೇರಿದಂತೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ಕೋಲಾರ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಇಸ್ರೇಲ್ ಕೃಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ನೀರಾವರಿ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಲಿದ್ದೇವೆ. ಇದರ ಅನುಷ್ಠಾನಕ್ಕೆ ₹145.92 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಇಸ್ರೇಲ್ ಮಾದರಿಯಲ್ಲಿ ಸಾಮೂಹಿಕ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದರಲ್ಲಿ ವೈಯಕ್ತಿಕ ಸಬ್ಸಿಡಿಗಿಂತಲೂ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ. ಹನಿ ನೀರಾವರಿ ಬಳಕೆ, ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಸಬ್ಸಿಡಿ ಕೃಷಿ ಯಂತ್ರೋಪಕರಣ ಯೋಜನೆಯನ್ನು ಮುಂದುವರಿಸಿರುವ ರಾಜ್ಯ ಸರ್ಕಾರ ₹ 441 ಕೋಟಿ ಕಾಯ್ದಿರಿಸಿದೆ. ಹಾಗೆಯೇ ಕೃಷಿ ಹೊಂಡಕ್ಕೆ ₹ 250 ಕೋಟಿ, ಮಣ್ಣಿನ ಆರೋಗ್ಯ ಕಾರ್ಡ್ನ 3ನೇ ಹಂತದ ಯೋಜನೆಯಲ್ಲಿ ₹ 25 ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಜಾರಿಗೆ ತರುತ್ತಿದ್ದು, ಸುಮಾರು 20 ಸಾವಿರ ಹೆಕ್ಟೇರ್ನಲ್ಲಿ 10 ವಲಯಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಸುಮಾರು ₹ 40 ಕೋಟಿ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.