ಬೆಂಗಳೂರು : ರಾಜ್ಯದ ಕಾರಾಗೃಹಗಳಲ್ಲಿರುವ ಜೈಲು ಹಕ್ಕಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮೂಲಭೂತ ಸೌಕರ್ಯ ಒದಗಿಸಿರುವ ಕುರಿತು ವಿವರವಾದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಕೈದಿಗಳ ಅಸಹಜ ಸಾವು ಹಾಗೂ ಮಿತಿಮೀರಿದ ಕೈದಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ, ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎಚ್. ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ, ಸರಕಾರದ ಪರ ವಾದ ಮಂಡನೆ ಮಾಡಿದ ವಕೀಲರು, 2018ರಲ್ಲಿ ಮಾನವ ಹಕ್ಕುಗಳ ಆಯೋಗವು ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಸಂಬಂಧಿಸಿದಂತೆ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ಹಾಗೆಯೇ ಬೀದರ್, ಹಾಸನ ಜಿಲ್ಲೆಗಳಲ್ಲಿ ಹೊಸ ಕಾರಾಗೃಹಗಳನ್ನು ನಿರ್ಮಾಣ ಮಾಡುತ್ತಿದ್ದು, ಹಳೆಯ ಕಾರಾಗೃಹಗಳಲ್ಲಿನ ಕೈದಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, 500 ಜನ ಸಾಮರ್ಥ್ಯ ಇರುವ ಒಂದು ಕಾರಾಗೃಹದಲ್ಲಿ 1 ಸಾವಿರ ಕೈದಿಗಳನ್ನು ಇರಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕೈದಿಗಳಿಗೆ ಗ್ರಂಥಾಲಯದ ಸೌಕರ್ಯ, ವೈದ್ಯಕೀಯ ಸೇವೆ, ಗುಣಮಟ್ಟದ ಆಹಾರ, ಶೌಚಾಲಯ, ಸ್ನಾನಗೃಹಗಳು, ಮಹಿಳಾ ಕೈದಿಗಳಿಗೆ ಹೆರಿಗೆ ವ್ಯವಸ್ಥೆ ಹಾಗೂ ಮಕ್ಕಳಿಗೆ ಚಿಕಿತ್ಸೆ ನೀಡುವ ಕುರಿತಂತೆ ವಿವರವಾದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.