ಬೆಂಗಳೂರು: ನಾಳೆ ಚಿತ್ರದುರ್ಗದಲ್ಲಿ ಬೋವಿ ಸಮುದಾಯದ ಬೃಹತ್ ಸಭೆ ಆಯೋಜಿಸಲಾಗಿದೆ. ನಾಳೆವರೆಗೂ ಕಾದು ನೋಡುತ್ತೇವೆ. ಸಮುದಾಯಕ್ಕೆ ಟಿಕೆಟ್ ನೀಡದೇ ಇದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ ಎಂದು ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತೊಮ್ಮೆ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬೋವಿ ಸಮುದಾಯದ ಕೈ ತಪ್ಪಿದ ಹಿನ್ನೆಲೆ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸಕ್ಕೆ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ, ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ.
ನಿನ್ನೆಯೂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದ ಸ್ವಾಮೀಜಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದರು. ಆದರೆ ನಿನ್ನೆ ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಟಿಕೆಟ್ ಘೋಷಿಸಿರುವ ಹಿನ್ನೆಲೆ ಇಂದು ಮತ್ತೆ ಯಡಿಯೂರಪ್ಪ ನಿವಾಸಕ್ಕೆ ಬಂದ ಸ್ವಾಮೀಜಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೂ ನಮ್ಮ ಸಹಮತವಿದೆ. ಆದರೆ ಸಮುದಾಯದಕ್ಕೆ ಟಿಕೆಟ್ ನೀಡದೇ ಇದ್ದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಸಿದ್ದರಾಮೇಶ್ವರ ಸ್ವಾಮೀಜಿ, ಯಡಿಯೂರಪ್ಪನವರು ಈಗಲೂ ಬೋವಿ ಸಮುದಾಯಕ್ಕೆ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಚಿತ್ರದುರ್ಗ ಅಥವಾ ಕೋಲಾರಕ್ಕೆ ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ನಿನ್ನೆ ಚಿತ್ರದುರ್ಗಕ್ಕೆ ಎ.ನಾರಾಯಣಸ್ವಾಮಿ ಹೆಸರು ಘೋಷಣೆ ಮಾಡಲಾಗಿದೆ. ನಾಳೆ ಚಿತ್ರದುರ್ಗದಲ್ಲಿ ಸಮುದಾಯದ ಬೃಹತ್ ಸಭೆ ಆಯೋಜಿಸಲಾಗಿದೆ. ನಾಳೆವರೆಗೂ ಕಾದು ನೋಡುತ್ತೇವೆ. ಸಮುದಾಯಕ್ಕೆ ಟಿಕೆಟ್ ನೀಡದೇ ಇದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ ಹಾಗೂ ನಮ್ಮ ಸಮುದಾಯದ ಇಬ್ಬರು ಬಿಜೆಪಿ ಶಾಸಕರಾದ ಗೂಳಿಹಟ್ಟಿ ಶೇಖರ್ ಮತ್ತು ಚಂದ್ರಪ್ಪರಾಜೀನಾಮೆ ನೀಡಲು ಬದ್ಧರಿದ್ದಾರೆ ಎಂದು ಬಿಜೆಪಿಗೆ ನೇರ ಎಚ್ಚರಿಕೆ ನೀಡಿದರು.