ಬೆಂಗಳೂರು: ಪ್ರಸಕ್ತ ಕರ್ನಾಟಕ ರಾಜಕೀಯ 'ಬೃಹನ್ನಾಟಕ' ನಿರ್ಣಾಯಕ ಹಂತ ತಲುಪುವತ್ತ ಸಾಗಿದ್ದು, ಅತೃಪ್ತ ಶಾಸಕರನ್ನು ಹೆಡೆಮುರಿ ಕಟ್ಟಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಾಂತರ ನಿಷೇಧ ಕಾಯ್ದೆ ಪ್ರಯೋಗಿಸಲು ಮುಂದಾಗಿವೆ. ಹಾಗಾದ್ರೆ, ಪಕ್ಷಾಂತರ ನಿಷೇಧ ಕಾಯ್ದೆ ಅಂದ್ರೆ ಏನು? ಯಾವಾಗ ಶುರುವಾಯ್ತು? ಕರ್ನಾಟಕ ರಾಜಕೀಯದ ಮುಂದಿನ ಗತಿ ಏನು? ಇಲ್ಲಿದೆ ಜನಸಾಮಾನ್ಯರಿಗೆ ಗೊತ್ತಿರಬೇಕಾದ ವಿಚಾರಗಳು.
ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 'ಪಕ್ಷಾಂತರ ನಿಷೇಧ ಕಾಯ್ದೆ' ಬಗ್ಗೆ ಒಂದಿಷ್ಟು ಕಿರು ಮಾಹಿತಿ ಇದು.
* ‘ಆಯಾ ರಾಮ್ ಗಯಾ ರಾಮ್’/ ಬಂದ ಪುಟ್ಟ ಹೋದ ಪುಟ್ಟ ಎಂಬುದು 1967ರಲ್ಲಿ ಹರಿಯಾಣ ಶಾಸಕ ಗಯಾ ಲಾಲ್ ಅವರು ಒಂದೇ ದಿನದಲ್ಲಿ ಮೂರು ಪಕ್ಷಗಳನ್ನು ಬದಲಾಯಿಸಿ ಕಪ್ಪೆ ಜಿಗಿತದ ಬಳಿಕ ಹುಟ್ಟಿಕೊಂಡು ವ್ಯಾಖ್ಯಾನವಿದು.
* ಪಕ್ಷಾಂತರ ನಿಷೇಧ ಕಾನೂನು ಎಂಬುದು ಚುನಾಯಿತ ಅಭ್ಯರ್ಥಿಯು ತನ್ನಿಷ್ಟದಂತೆ ಪಕ್ಷ ಬದಲಾಯಿಸುವುದನ್ನು ತಡೆಯುವ ಉದ್ದೇಶದಿಂದ ರಚಿತವಾಗಿದೆ.
* ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವಧಿಯಲ್ಲಿ 1985ರ ಜನವರಿ 30ರಂದು 'ಪಕ್ಷಾಂತರ ನಿಷೇಧ ಕಾಯಿದೆ'ಯನ್ನು ಜಾರಿಗೆ ತರಲಾಯಿತು. ಸಂವಿಧಾನದ 10ನೇ ಪರಿಚ್ಚೇಧದಲ್ಲಿ ಇದನ್ನು ಸೇರಿಸಲಾಗಿದ್ದು, ಈ ಕಾಯ್ದೆ ಉಲ್ಲಂಘಿಸುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬಹುದು.
* ಚುನಾಯಿತ ಪ್ರತಿನಿಧಿ ಪಕ್ಷಾಂತರ ಮಾಡಿದ್ದಾನಾ ಇಲ್ಲವೋ? ಎಂಬ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ 'ಪಕ್ಷಾಂತರ ನಿಷೇಧ ಕಾಯ್ದೆ'ಯ ಪ್ರಕಾರ ಸಭಾಧ್ಯಕ್ಷರಿಗಿದೆ.
* ಶಾಸಕರೊಬ್ಬರು ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದರೆ ಅಥವಾ ಮತದಾನದ ಸಂದರ್ಭದಲ್ಲಿ ಪಕ್ಷದ ನಾಯಕತ್ವದ ನಿರ್ದೇಶನಗಳನ್ನು ಧಿಕ್ಕರಿಸಿದರೆ ಅದನ್ನು ದೋಷಪೂರಿತರೆಂದು ಪರಿಗಣಿಸಲಾಗುತ್ತದೆ.
ಶಾಸಕರನ್ನು ಯಾವಾಗ ಅನರ್ಹಗೊಳಿಸಬಹುದು?
* ರಾಜಕೀಯ ಪಕ್ಷದಿಂದ ಆಯ್ಕೆಯಾಗುವ ಯಾವುದೇ ಶಾಸಕ/ ಸಂಸದನು ತಾನು ಆಯ್ಕೆಯಾದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ, ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರೇ ಅದು ಪಕ್ಷಾಂತರ. ಅಂಥವರನ್ನು ಸ್ಪೀಕರ್ ವಿಚಾರಣೆ ನಡೆಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.
* ಅಧಿವೇಶನದ ಸಂದರ್ಭದಲ್ಲಿ ಮಸೂದೆಗಳ ಮೇಲೆ ನಡೆಯುವ ಮತದಾನಕ್ಕೆ ಸರ್ಕಾರದ ಪರ ಸಮ್ಮತಿ ಸೂಚಿಸುವಂತೆ ರಾಜಕೀಯ ಪಕ್ಷವೊಂದು ತನ್ನ ಶಾಸಕ/ಸಂಸದರಿಗೆ ಲಿಖಿತ ಸೂಚನೆ (ವಿಪ್) ಜಾರಿಗೊಳಿಸಿದ ಬಳಿಕವೂ, ಅದನ್ನು ಉಲ್ಲಂಘನೆ ಮಾಡುವ ಹಾಗೂ ಮತದಾನದಿಂದ ದೂರ ಉಳಿಯುವವರನ್ನು ಪಕ್ಷಾಂತರಿ ಎಂದು ಪರಿಗಣಿಸಿ ಅಂತವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.
ಹಾಗಾದ್ರೆ, ಯಾವುದು ಪಕ್ಷಾಂತರವಲ್ಲ?
* ಒಬ್ಬ ಶಾಸಕನು ತನ್ನ ಮೂಲ ಪಕ್ಷದ ಸಮೇತ ಬೇರೊಂದು ಪಕ್ಷಕ್ಕೆ ಸೇರಿ ತಾನು ಹಾಗೂ ಉಳಿದ ಮೂಲ ರಾಜಕೀಯ ಪಕ್ಷದ ಸದಸ್ಯರು ಆ ಪಕ್ಷದ ಸದಸ್ಯರಾಗಿದ್ದೇವೆ ಎಂದು ಘೋಷಿಸಿದರೆ ಅದು ಪಕ್ಷಾಂತರವಾಗುವುದಿಲ್ಲ.
* ಸಭಾಪತಿ, ಸ್ಪೀಕರ್ಗಳು ತಾವು ಪ್ರತಿನಿಧಿಸುವ ಪಕ್ಷಕ್ಕೆ ರಾಜೀನಾಮೆ ನೀಡುವುದು ಪಕ್ಷಾಂತರ ಎನ್ನಿಸುವುದಿಲ್ಲ.
* ಯಾವುದೇ ಒಂದು ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು/ಸಂಸದರು ಬೇರೆ ಪಕ್ಷದ ಜತೆ ವಿಲೀನವಾದರೆ, ಪ್ರತ್ಯೇಕ ರಾಜಕೀಯ ಗುಂಪು ಮಾಡಿಕೊಂಡರೆ ಅದು ಪಕ್ಷಾಂತರವಲ್ಲ.
ಶಾಸಕರನ್ನು ಅನರ್ಹಗೊಳಿಸಿದರೆ ಏನಾಗುತ್ತದೆ?
* ಪ್ರಸ್ತುತ ಸದನದ (15 ನೇ ಶಾಸಕಾಂಗ ಸಭೆ) ಸದಸ್ಯರನ್ನು ಅನರ್ಹಗೊಳಿಸಿದರೆ, ಇದರರ್ಥ ಅವಳು/ ಅವರು 15ನೇ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ, ಅವರು/ ಅವಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (16ನೇ ಶಾಸಕಾಂಗ ಸಭೆ) ಸ್ಪರ್ಧಿಸಬಹುದು. ಅಲ್ಲದೆೇ ಜನಪ್ರತಿನಿಧಿಗಳ ಕಾಯ್ದೆ- 164 (1ಬಿ) ಅನ್ವಯ, ಅನರ್ಹಗೊಂಡ ಸದಸ್ಯ/ ಸದಸ್ಯೆ ಅವಧಿ ಮುಗಿಯುವವರೆಗೆ ಮರು ಆಯ್ಕೆಯಾದರೂ ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲ.
* ಕೆಲವು ಸಂಸದರು/ ಶಾಸಕರನ್ನು ಅಪರಾಧ ಶಿಕ್ಷೆಗೆ ಒಳಗಾದ ಬಳಿಕವೂ ಅವರನ್ನು ಅನರ್ಹಗೊಳಿಸಿದರೆ, ಜನಪ್ರತಿನಿಧಿಗಳ (ಆರ್‌ಪಿ) ಕಾಯ್ದೆಯ ಸೆಕ್ಷನ್- 8ರ ಅಡಿಯಲ್ಲಿ ಅವರನ್ನು 6 ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗುತ್ತದೆ. ಆದರೆ, ಆರ್‌ಪಿ ಕಾಯ್ದೆಯ ಸೆಕ್ಷನ್- 8 (4) ಅನ್ವಯ ಅನರ್ಹ ಸಂಸದರು/ ಶಾಸಕರು ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಿದರೆ ಶಿಕ್ಷೆಗೊಳಗಾದ ನಂತರವೂ ಅವರು ಅಧಿಕಾರದಲ್ಲಿ ಮುಂದುವರಿಯಬಹುದು.
ಸಮಯದ ಮಿತಿ
* ಈ ಕಾಯ್ದೆಯು ಅನರ್ಹತೆಯ ಅವಧಿಯನ್ನು ನಿಗದಿಪಡಿಸುವ ಅಧಿಕಾರವನ್ನು ಸ್ಪಷ್ಟಪಡಿಸಿಲ್ಲ.
ರಾಜೀನಾಮೆ v/s ಅನರ್ಹತೆ
* ಶಾಸಕರನ್ನು ಅನರ್ಹಗೊಳಿಸಿದರೆ, ಅವಳು/ ಅವರು ಮರು ಚುನಾಯಿತರಾಗದೆ ನೂತನ ಸರ್ಕಾರದಲ್ಲಿ ಸಚಿವರಾಗಲು ಸಾಧ್ಯವಿಲ್ಲ.
* ಆದರೆ, ಶಾಸಕ/ ಶಾಸಕಿಯೊಬ್ಬರು ರಾಜೀನಾಮೆ ನೀಡಿದರೆ ಅವರನ್ನು ಸಚಿವರನ್ನಾಗಿ ಸೇರಿಸಿಕೊಳ್ಳಬಹುದು ಮತ್ತು ಆರು ತಿಂಗಳೊಳಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಮಾಡಿಕೊಳ್ಳಬಹುದು.