ಬೀದರ್ : ಯುವಕರು ಭಾರತೀಯ ಸೇನೆಯಲ್ಲಿ ಸೇರಿ ಉತ್ತಮ ಕಾರ್ಯನಿರ್ವಹಿಸುವ ಮೂಲಕ ದೇಶ ಮತ್ತು ನಮ್ಮ ಭಾಗಕ್ಕೆ ಹೆಸರು ತರಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಮಂಗಳವಾರ ಅಗ್ನಿಪಥ ಯೋಜನೆಯಡಿಯಲ್ಲಿ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ರ‍್ಯಾಲಿಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಅತಿ ಉತ್ಸಾಹದಿಂದ ಭಾಗವಹಿಸುವುದು ಕಂಡು ತುಂಬಾ ಸಂತೋಷವಾಗುತ್ತಿದೆ. ಇದರಲ್ಲಿ ಹೆಚ್ಚಿನ ಜನರು ಆಯ್ಕೆಯಾಗಬೇಕು ಯಾವುದೇ ಕಾರಣಕ್ಕೆ ತಾವು ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಆಯ್ಕೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಬೇಕೆಂದು ಕಿವಿಮಾತು ಹೇಳಿದರು.
ಡಿಸೆಂಬರ್ 5 ರಿಂದ 22 ರವರೆಗೆ ನಡೆಯುತ್ತಿರುವ ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದು, ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಬೀದರ್ ಜಿಲ್ಲಾಡಳಿತ ಸೇನೆಯ ಅಧಿಕಾರಿಗಳಿಗೆ ನೀಡಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಾವುಗಳು ಆಯ್ಕೆಯಾಗಬೇಕು ತಮಗೆಲ್ಲರಿಗೂ ಶುಭಾಶಯಗಳು ಎಂದು ಯುವನಜನತೆಗೆ ಜಿಲ್ಲಾಧಿಕಾರಿ ಹೇಳಿದರು.
ಬಳಿಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಅವರು ಮಾತನಾಡಿ, ಕಳೆದ ಹಲವು ದಿನಗಳಿಂದ ಸೇನಾ ನೇಮಕಾತಿ ರ‍್ಯಾಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ತಾವೆಲ್ಲರೂ ಒಳ್ಳೆಯ ಸಾಹಸ ಪ್ರದರ್ಶನ ನೀಡುವ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೇಜರ್ ಜನರಲ್ ಪಿ. ರಮೇಶ ವಿಎಸ್‌ಎಮ್ ಅಡಿಷನಲ್ ಡೈರೆಕ್ಟರ್ ಜನರಲ್ ಝೋನಲ್ ನೇಮಕಾತಿ ಕಚೇರಿ ಬೆಂಗಳೂರು, ಕರ್ನಲ್ ನಿಶಾಂತ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೆಘಣ್ಣವರ, ಸೇನಾ ನೇಮಕಾತಿ ರ‍್ಯಾಲಿ ನೋಡಲ್ ಅಧಿಕಾರಿಗಳಾದ ಗೌತಮ್ ಅರಳಿ, ಅಭಯ್ ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್: ಅಗ್ನಿವೀರ್ ನೇಮಕಾತಿ ರ್‍ಯಾಲಿಗೆ ಭೇಟಿ ನೀಡಿದ ಸಚಿವ ಪ್ರಭು ಬಿ ಚವ್ಹಾಣ