ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚೊಂಡಿಮುಖೇಡ್ ಗ್ರಾಮದಲ್ಲಿ ಅಕ್ರಮವಾಗಿ ಸಾಮಿಲ್(ಕಟ್ಟಿಗೆ ಕತ್ತರಿಸುವ ಯಂತ್ರ) ಹಾಕಲಾಗಿದೆ. ಇದಕ್ಕಾಗಿ ಗಡಿ ಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮಹಾರಾಷ್ಟ್ರ ಮೂಲದ ಅದೆಷ್ಟೊ ಜನರು ಕನ್ನಡದ ನೆಲದ ಅರಣ್ಯ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುವ ಮಾಫಿಯಾ ನಡೆಸಿದ್ದಾರೆ. ಚೊಂಡಿಮುಖೇಡ್ ಗ್ರಾಮದಲ್ಲಿ ನಾಲ್ಕು ಸಾಮಿಲ್ ಕಂಡು ಬಂದಿದ್ದು, ದಶಕಗಳಿಂದ ಈ ಅಕ್ರಮ ದಂಧೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಈ ಕಡೆಗೆ ಗಮನ ಹರಿಸುತ್ತಿಲ್ಲ ಅಂತಾರೆ ಸ್ಥಳೀಯರು.
ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 100 ಕಿಲೋ ಮಿಟರ್ ದೂರದಲ್ಲಿರುವ ಈ ಗ್ರಾಮ ಭೌಗೋಳಿಕವಾಗಿ ಕರ್ನಾಟಕಕ್ಕೆ ಸೇರಿದೆ. ಆದ್ರೆ ಇಲ್ಲಿ ಸರ್ಕಾರದ ಅಧಿಕಾರಿಗಳು ಮಾತ್ರ ಕಣ್ಣಾಯಿಸದೇ ಇರುವುದರಿಂದ ಬೃಹತ್ತಾಗಿ ಬೆಳೆದುನಿಂತ ಮರಗಳು ಸರ್ವನಾಶವಾಗುತ್ತಿವೆ.
ಅಕ್ರಮ ದಂಧೆಗೆ ಪೂರಕ ಸ್ಥಾನವಾದ ಗಡಿಗ್ರಾಮ:
ಸುತ್ತಲೂ ಮಹಾರಾಷ್ಟ್ರ ಆವರಿಸಿ ನಡುಗಡ್ಡೆಯಂತಿರುವ ರಾಜ್ಯದ ಸುಮಾರು 1800 ಎಕರೆ ಜಮೀನು ಹೊಂದಿರುವ ಚೊಂಡಿಮುಖೇಡ್ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದವರು ಅಕ್ರಮ ಅಡ್ಡೆಗಳನ್ನು ಹಾಕಿಕೊಂಡು ರಾಜ್ಯದ ಮರಗಳ ಮಾರಣಹೋಮ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಹಸಿರಿದ್ದರೆ ಉಸಿರು ಅನ್ನೋದನ್ನು ಇಲ್ಲಿನ ಜನರೆಲ್ಲರೂ ಎಚ್ಚೆತ್ತೆಉಕೊಂಡು ಅಕ್ರಮದ ವಿರುದ್ಧ ಧ್ವನಿ ಎತ್ತಬೇಕಿದೆ. ಅರಣ್ಯ ಇಲಾಖೆಯವರು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.