ಬೀದರ್: ಭೀಕರ ಬರಗಾಲದಿಂದ ಬೀದರ್ನಲ್ಲಿ ಕೆರೆ, ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿದ್ದು, ಗಣೇಶ ಮೂರ್ತಿಗಳ ನಿಮಜ್ಜನ ಹೇಗೆ ಎಂದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.
ಪಿಓಪಿ ಗಣಪನ ಮೂರ್ತಿಯ ಬ್ಯಾನ್ ಮಾಡಿದ್ದಕ್ಕೆ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ. ಹಲವು ವಿಘ್ನಗಳ ನಡುವೆ ಈ ಬಾರಿಯ ವಿನಾಯಕನ ಹಬ್ಬ ಬಲು ಜೋರಾಗಿ ನಡೆಯುತ್ತಿದೆ.
ಪರಿಸರ ಮಾಲಿನ್ಯ, ಜಲ ಮಾಲಿನ್ಯ ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ ಕಳೆದ ಒಂದು ವಾರದಿಂದ ಪಿಓಪಿ ಗಣೇಶ ಮೂರ್ತಿಗಳ ನಿಷೇಧ ಮಾಡಿದೆ. ಆದರೆ, ವ್ಯಾಪಾರಸ್ಥರು ನಿನ್ನೆ ಮಾರುಕಟ್ಟೆಗೆ ಸಾಕಷ್ಟು ಪಿಓಪಿ ಗಣೇಶನನ್ನ ತಂದಿದ್ದರು. ಹೀಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾರುಕಟ್ಟೆಗೆ ತಂದ ಗಣೇಶ ಮೂರ್ತಿಗಳನ್ನು ಸೀಜ್ ಮಾಡಲು ಸಿಎಂಸಿ ಅಧಿಕಾರಿಗಳು ಪೊಲೀಸರು ಆಗಮಿಸಿದ್ದರು. ಈ ವೇಳೆ ಕೆಲ ಕಾಲ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿಯೂ ಕೂಡ ನಡೆಯಿತು.
ನಮಗೆ ಮೊದಲೇ ಹೇಳಿದ್ದರೆ ಮಾರಾಟ ಮಾಡುತ್ತಿರಲಿಲ್ಲ. ಪಿಓಪಿ ಗಣೇಶನ ಮೂರ್ತಿಗಳು ಈಗಾಗಲೇ ಸ್ಟಾಕ್ ಮಾಡಿಕೊಂಡಿದ್ದೇವೆ. ಸಾಕಷ್ಟು ಹಣ ಖರ್ಚು ಮಾಡಿ ಗಣೇಶನನ್ನ ಮಾಡಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಹರಿಹಾಯ್ದರು.