ಬೀದರ್: ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಇಲ್ಲದಿರುವುದಕ್ಕೆ ತಾಲೂಕು ಆಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಮೃತದೇಹವನ್ನು ರಸ್ತೆ ಬದಿಯಲ್ಲಿಟ್ಟು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಔರಾದ್ ತಾಲೂಕಿನ ಡೊಂಗರಗಾಂವ್ ಗ್ರಾಮದಲ್ಲಿ ಪದ್ಮಿನಿಬಾಯಿ (70) ಎಂಬವರು ಮೃತಪಟ್ಟಿದ್ದರು. ಗ್ರಾಮದಲ್ಲಿ ಈ ಹಿಂದೆಲ್ಲಾ ರೈತ ಕಿಶನ್ ರಾವ್ ಪಾಂಚಾಳ ಎಂಬವರ ಗದ್ದೆ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಅವರು ಅಂತ್ಯಕ್ರಿಯೆಗೆ ವಿರೋಧಿಸಿರುವ ಪರಿಣಾಮ ಪರಿಸ್ಥಿತಿ ಕೈ ಮೀರಿದೆ ಎನ್ನಲಾಗಿದೆ.
ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇಲ್ಲ. ಈ ವಿಚಾರವನ್ನು ಕಳೆದ ಹಲವು ವರ್ಷಗಳಿಂದ ತಹಸೀಲ್ದಾರ ಗಮನಕ್ಕೆ ತರಲಾಗುತ್ತಿದೆ. ಆದ್ರೆ ಯಾರಾದ್ರೂ ಸತ್ತಾಗ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ನಂತರ ಈ ವಿಷಯದಲ್ಲಿ ಕ್ಯಾರೆನ್ನುತ್ತಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಇವತ್ತು ನಮಗೆ ಅಂತ್ಯ ಸಂಸ್ಕಾರ ಮಾಡಲು ಮೂರಡಿ ಜಾಗವೂ ಇಲ್ಲದಾಗಿದೆ ಅನ್ನೋದು ಗ್ರಾಮಸ್ಥರ ದೂರು.
ನಸುಕಿನ ಜಾವ ಅಜ್ಜಿ ಮೃತಪಟ್ಟಿದ್ದು ಗ್ರಾಮಸ್ಥರು ಗ್ರಾಮದ ಹೊರ ವಲಯದ ಖೇರ್ಡಾ- ಮುಧೋಳ ರಸ್ತೆಯ ಮೇಲೆ ತಂದು ಶವವಿಟ್ಟು ಸುಮಾರು 6 ಗಂಟೆಗಳ ಕಾಲ ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಹೊಕ್ರಾಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿದ್ದು ಪ್ರತಿಭಟನಾಕಾರರ ಮನವೊಲಿಸಿದ್ದಾರೆ ಎನ್ನಲಾಗಿದೆ.