ಬಸವಕಲ್ಯಾಣ: ಶರಣರ ಕಾಯಕ ಭೂಮಿಯಲ್ಲಿ ಸೇವೆ ಸಲ್ಲಿಸಲು ಸಿಕ್ಕ ಅವಕಾಶ ಯಾವತ್ತು ಮರೆಯಲಾಗದು. ಇಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ಸಹಾಯಕ ಆಯುಕ್ತ ಭಂವರಸಿಂಗ್ ಮೀನಾ ಹೇಳಿದರು.
ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ ಪದೋನ್ನತಿಯೊಂದಿಗೆ ಇಲ್ಲಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತಮ್ಮ ಬೀಳ್ಕೊಡುಗೆ ಹಾಗೂ ನೂತನ ಸಹಾಯಕ ಆಯುಕ್ತರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೇವಾ ಅವಧಿಯಲ್ಲಿ ಸಹಕರಿಸಿದ ತಾಲೂಕು ಅಧಿಕಾರಿಗಳು, ಸಿಬ್ಬಂದಿಯನ್ನು ಸ್ಮರಿಸಿದರು. ಕಳೆದ 10 ತಿಂಗಳ ಅವಧಿಯಲ್ಲಿ ಇಲ್ಲಿಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ.
ಇನ್ನು ಸಾಕಷ್ಟು ಕೆಲಸ ಕಾರ್ಯಗಳು ಮಾಡಬೇಕಾಗಿತ್ತು. ಆದರೆ ಕೊರೊನಾ ಸೋಂಕು ಹರಡಿದ ಕಾರಣ ಅದರ ನಿಯಂತ್ರಣದಲ್ಲಿಯೇ ಸಮಯ ಹಿಡಿಯಿತು. ಸಂದಿಗ್ಧ ಸಯಮದಲ್ಲಿ ಎಲ್ಲರೂ ಕೂಡಿ ಟೀಮ್ ವರ್ಕ್ ಮಾಡಿದಕ್ಕಾಗಿಯೇ ಇಂದು ಕೊರೊನಾ ನಿಯಂತ್ರಣಕ್ಕೆ ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ನೂತನ ಸಹಾಯಕ ಆಯುಕ್ತ ಭುವನೇಶ ಪಾಟೀಲ ಮಾತನಾಡಿ, ಎಲ್ಲರೂ ಕೂಡಿಕೊಂಡು ಕೆಲಸ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯವಿದ್ದು, ಹಿಂದಿನ ಸಹಾಯಕ ಆಯುಕ್ತರಿಗೆ ನೀಡದ ಸಹಕಾರ ಮುಂದೆಯೂ ನೀಡಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಚಿಟಗುಪ್ಪಾ ತಹಶೀಲ್ದಾರ ಮಹ್ಮಮದ್ ಜೀಯಾವುದ್ದಿನ್, ಸಂಗಯ್ಯ ಸ್ವಾಮಿ, ಮಿಲಿಂದ ಗುರುಜಿ, ತಾಪಂ ಇಓ ಮಡೋಳಪ್ಪ ಪಿ.ಎಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಿಂಗರಾಜ ಅರಸ್, ಬಿಸಿಎಂ ಇಲಾಖೆ ಅಧಿಕಾರಿ ಮಂಜುನಾಥ ಮುಂಗಳೆ, ಎಇಇ ರಾಜಕುಮಾರ ಸಾಹುಕಾರ ಇತರರು ಉಪಸ್ಥಿತರಿದ್ದರು.