ಬಸವಕಲ್ಯಾಣ : ಅಕ್ರಮ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಹಿಡಿಯಲು ಹೊಗಿದ್ದ ಅಬಕಾರಿ ಇಲಾಖೆಯ ಗಾರ್ಡ್ ಒಬ್ಬರು ಬಾವಿಗೆ ಬಿದ್ದು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ನುಸುಕಿನ ಜಾವ ತಾಲೂಕಿನ ಉಜಳಂಬವಾಡಿ ಸಮಿಪ ಮಹಾರಾಷ್ಟ್ರದಿಂದ ಮದ್ಯ ಸರಬರಾಜು ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇನ್ಸ್ಪೆಕ್ಟರ್ ಜಾಫರ್ ಮಿಯಾ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಕೈಗೆ ಸಿಕ್ಕ ಆರೋಪಿಯನ್ನು ಹಿಡಿದು ನಿಂತಿದ್ದ ಅಬಕಾರಿ ಇಲಾಖೆ ಗಾರ್ಡ್ ರವಿ ಮಾಳಿಯನ್ನು ಆರೋಪಿ ತಳ್ಳಿ ಓಡಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನನ್ನು ಹಿಡಿಯಲು ಓಡುತ್ತಿದ್ದ ಗಾರ್ಡ್ ರವಿ ಆಯಾ ತಪ್ಪಿ ಸುಮಾರು 20 ಅಡಿ ಆಳದ ಬಾವಿದೆ ಬಿದ್ದಿದ್ದಾರೆ. ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾರ್ಡ್ ರವಿಗಾಗಿ ಹುಡುಕಾಟ ನಡೆಸಿದ್ದಾಗ ರವಿ ಬಾವಿಗೆ ಬಿದ್ದಿದ್ದು ಕಂಡು ಬಂದಿದೆ.
ನಂತರ ಅವರನ್ನು ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ರವಿ ಅವರ ಬೆನ್ನು ಹಾಗೂ ಸೊಂಟದ ಭಾಗದಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.