ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್ ಜುಲ್ಫೇಕರ್ ಹಾಸ್ಮಿ ಹೇಳಿದರು.
ಬಹುಜನ ಕ್ರಾಂತಿ ಮೋರ್ಚಾದಿಂದ ಸ್ಥಳೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಮಿನಿ ವಿಧಾನ ಸೌಧದ ತಹಸೀಲ್ ಕಚೇರಿಗೆ ಅವರು ಆಗಮಿಸಿದ್ದರು. ಈ ವೇಳೆ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ. ಇದು ಮುಸ್ಲಿಂ ವಿರೋಧಿಯಷ್ಟೇ ಅಲ್ಲ, ಎಸ್‌ಸಿ/ಎಸ್‌ಟಿ, ಒಬಿಸಿ, ಸೇರಿದಂತೆ ಅನೇಕ ಸಮುದಾಯಗಳಿಗೆ ವಿರೋಧಿಯಾಗಿದೆ. ದೇಶದ ಅಖಂಡತೆಗಾಗಿ ದೇಶದಾದ್ಯಂತ ಆಂದೋಲನ ಮಾಡಲಿದ್ದೇವೆ ಎಂದರು.
ಹೋರಾಟದ ಪ್ರಥಮ ಭಾಗವಾಗಿ ಎಲ್ಲೆಡೆ ಇಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜನವರಿ 3 ರಂದು ಜಾಥಾ ನಡೆಸಲಾಗುವುದು. ಅನಂತರ ಜನವರಿ 30ರಂದು ಭಾರತ ಬಂದ್ ಮಾಡುವ ಯೋಚನೆಯೂ ಇದೆ ಎಂದರು.
ಇನ್ನೂ ಹಾಸ್ಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಸುನೀಲ್ ಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ, ಅಷ್ಟರಲ್ಲಾಗಲೇ ಅವರು ಮನವಿ ಪತ್ರ ಸಲ್ಲಿಸಿ ತೆರಳಿದ್ದರು.