ಬೀದರ್: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಬೀದರ್ನ ನೌಬಾದ್ನಿಂದ ಕಮಲನಗರ ಗಡಿ ಚೇಕ್ ಪೋಸ್ಟ್ವರೆಗೆ 2017ರಲ್ಲಿ ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಭಾರತ ಮಾಲಾ ಯೋಜನೆ ಅಡಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೆದ್ದಾರಿ ಮಾಡುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಜನರಲ್ಲಿ ಹೈಟೆಕ್ ರಸ್ತೆಯ ಕನಸು ಕಾಣುವಂತೆ ಮಾಡಿದ್ದರು.
ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯಕ್ಕೆ ಹೆದ್ದಾರಿ ಕಾಮಗಾರಿ ಆರಂಭವಾಗುವ ಮೊದಲೇ ನೆನೆಗುದಿಗೆ ಬಿದ್ದಿದೆ. ಗುಂಡಿಗಳಿಂದ ಹದಗೆಟ್ಟ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಅದೆಷ್ಟೋ ರಸ್ತೆ ಅಪಘಾತದಲ್ಲಿ ಹಲವರು ಸಾವನ್ನಪ್ಪಿಸ್ದಾರೆ.
ಓದಿ.. ಸುಸಜ್ಜಿತ ರಸ್ತೆ - ಸುರಕ್ಷಿತ ಪಾದಚಾರಿ ಮಾರ್ಗ: ಅಪಘಾತಕ್ಕೆ ಕಡಿವಾಣ ಹಾಕೋಣ!
ರಸ್ತೆ ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿ ಬೆಳೆಗಳು ಧೂಳಿಗೆ ತುತ್ತಾಗಿ ಅನ್ನದಾತರಿಗೆ ನಷ್ಟವಾಗ್ತಿದೆ. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದರು.
ಈ ನಡುವೆ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ.