ಬೀದರ್: ಕಳೆದ ಎರಡು ತಿಂಗಳಿನಿಂದ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು)ದ ಎಸಿ ಬಂದ್ ಆಗಿದ್ದು, ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ದಾಖಲಾಗಲು ಬರುವ ರೋಗಿಗಳು ತಮ್ಮೊಂದಿಗೆ ಒಂದು ಫ್ಯಾನ್ ಕೂಡ ಹಿಡಿದುಕೊಂಡು ಬರುವುದು ಅನಿವಾರ್ಯವಾಗಿದೆ.
ಹೌದು, ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವಂತಹ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ನೀಡಬೇಕಾಗುತ್ತೆ. ಆದ್ರೆ ಆ ಯಂತ್ರಗಳು ಕೈಕೊಟ್ಟಿದ್ದು, ರೋಗಿಗಳು ಮನೆಯಿಂದಲೇ ಫ್ಯಾನ್ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಸಿಗಳಿಲ್ಲದೆ ರೋಗಿಗಳು ಹೈರಾಣಾಗಿದ್ದು, ಅವರ ಸಂಬಂಧಿಕರು ಮನೆಯಿಂದಲೇ ಫ್ಯಾನ್ ತಂದು ರೋಗಿಗಳನ್ನು ಆರೈಕೆ ಮಾಡುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಮೆಡಿಕಲ್ ಸೂಪರಿಂಡೆಂಟ್ ಡಾ. ವಿಜಯಕುಮಾರ್ ಅವರನ್ನ ಕೇಳಿದ್ರೆ, ಕಳೆದ 20 ದಿನಗಳಿಂದಷ್ಟೇ ತೀವ್ರ ನಿಗಾ ಘಟಕದಲ್ಲಿ ಹವಾ ನಿಯಂತ್ರಿತ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅದರ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ ಅಂತ ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಬಡವರ ಪಾಲಿನ ಸಂಜೀವಿನಿ ಆಗಲೆಂದು ಕೋಟಿ ಕೋಟಿ ಹಣ ಖರ್ಚು ಮಾಡಿ ಸರ್ಕಾರ ಆಸ್ಪತ್ರೆ ಕಟ್ಟಿಸಿದ್ರೆ, ಆಡಳಿತ ಮಂಡಳಿಯವರ ಬೇಜವಾಬ್ದಾರಿತನದಿಂದಾಗಿ ರೋಗಿಗಳಿಗೆ ಮಾತ್ರ ಯಾವುದೇ ರೀತಿ ಸೌಕರ್ಯಗಳು ಸಿಗುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪವಾಗಿದೆ. ಐಸಿಯು ವಿಭಾಗದಲ್ಲಿ ದಾಖಲಾಗುವ ರೋಗಿಗಳು ಜೊತೆಗೆ ಫ್ಯಾನ್ ತೆಗೆದುಕೊಂಡು ಬರಬೇಕು ಅನ್ನೋದು ವಿಪರ್ಯಾಸವೇ ಸರಿ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಗಮನಹರಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.