ಬಸವಕಲ್ಯಾಣ: ಶಿಕ್ಷಕರೊಬ್ಬರು ವರ್ಗಾವಣೆಗೊಂಡ ಸುದ್ದಿ ತಿಳಿದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ತಾಲೂಕಿನ ಭೋಸ್ಗಾ ಗ್ರಾಮದಲ್ಲಿ ನಡೆದಿದೆ.
ಕಳೆದ 9 ವರ್ಷಗಳಿಂದ ಭೋಸ್ಗಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ನಾಗೇಂದ್ರಪ್ಪ (ಬಂಡೆಪ್ಪ) ಬಿರಾದಾರ್ ತಾಲೂಕಿನ ನಾರಾಯಣಪೂರ ಗ್ರಾಮದ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಮಕ್ಕಳ ಸಾಹಿತ್ಯದಲ್ಲಿ ಉತ್ತಮ ಹೆಸರು ಮಾಡಿರುವ ಇವರು, ಶಾಲೆಯ ಮಕ್ಕಳೊಂದಿಗೆ ಬೆರೆತು ಪಾಠ ಮಾಡುತಿದ್ದರು. ಹೀಗಾಗಿ, ಸಹಜವಾಗಿಯೇ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.
ವರ್ಗಾವಣೆಗೊಂಡ ಹಿನ್ನೆಲೆ ಶುಕ್ರವಾರ ಶಿಕ್ಷಕ ನಾಗೇಂದ್ರಪ್ಪ ಅವರು ಭೋಸ್ಗಾ ಗ್ರಾಮದ ಶಾಲೆಯಿಂದ ಬಿಡುಗಡೆಗೊಂಡಿದ್ದಾರೆ. ಶಿಕ್ಷಕರು ಇಲ್ಲಿಂದ ಬಿಟ್ಟು ಹೋಗುತ್ತಿದ್ದಾರೆ ಎನ್ನುವ ವಿಷಯ ಅರಿತ ಶಾಲೆಯ ವಿದ್ಯಾರ್ಥಿಗಳು ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಬೇಡಿ ಸರ್, ಎಂದು ಅಳುತ್ತಾ ಶಿಕ್ಷಕರ ಕಾಲಿಗೆ ಬಿದ್ದು ಬೇಡಿಕೊಳ್ಳಲು ಮುಂದಾಗಿದ್ದಾರೆ.
ಅನಿರೀಕ್ಷಿತವಾಗಿ ನಡೆದ ಈ ಪ್ರಸಂಗದಿಂದಾಗಿ ಶಾಲೆಯ ಪರಿಸರದಲ್ಲಿ ಗಲಿ ಬಿಲಿ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಸ್ಥಳದಲಿದ್ದ ಶಾಲೆ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳನ್ನ ಸಮಾಧಾನ ಪಡಿಸಲು ಮುಂದಾದರು.
ಭಾವುಕರಾಗಿದ್ದ ಮಕ್ಕಳೊಂದಿಗೆ ಮಾತನಾಡಿದ ಶಿಕ್ಷಕ ನಾಗೇಂದ್ರ ಬಿರಾದಾರ, ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಎನ್ನುವುದು ಸಾಮಾನ್ಯವಾಗಿ ನಡೆಯುವ ಸಂಗತಿ. ಅವಕಾಶ ಸಿಕ್ಕಷ್ಟು ದಿನಗಳ ಕಾಲ ನಿಮ್ಮೆಲ್ಲರ ಸಹಕಾರದಿಂದಾಗಿ ಉತ್ತಮ ಸೇವೆ ಸಲ್ಲಿಸಲು ಪ್ರಯತ್ನಿಸಿದ್ದೇೆನೆ. ವರ್ಗಾವಣೆಗೊಂಡ ಈ ಸ್ಥಾನಕ್ಕೆ ಮತ್ತೆ ನನಗಿಂತಲು ಒಳ್ಳೆಯ ಶಿಕ್ಷಕರು ಬರುತ್ತಾರೆ. ನಿವ್ಯಾರು ಚಿಂತೆ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ: ನೆಲಮಂಗಲ : ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಕಣ್ಣೀರು ಹಾಕಿದ ವಿದ್ಯಾರ್ಥಿಗಳು