ಬೀದರ್: ಬಡವರಿಗಾಗಿ ಸರಬರಾಜಾಗುವ ಪಡಿತರವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿವಿಧ ಆಹಾರ ಧಾನ್ಯ ಗೋದಾಮುಗಳ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ಬೀದರ್, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ಜಾಲ ಕೆಲಸ ಮಾಡುತ್ತಿದೆ. ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ಯಾರೇ ಪ್ರಭಾವಿಗಳಾದರೂ ಸರಿ ಎಂದರು.
ರಾಜ್ಯದಲ್ಲಿ ಪಡಿತರಕ್ಕೆ ಕೊರತೆ ಇಲ್ಲ. ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪಡಿತರ ಸರಬರಾಜು ಮಾಡಿದೆ. ಹೀಗಾಗಿ ಜಿಲ್ಲೆಯಲ್ಲಿರುವ ಪಡಿತರ ಚೀಟಿ ಇಲ್ಲದವರು, ವಲಸಿಗರು ಹಾಗೂ ನಿರ್ಗತಿಕರಿಗೂ ಕಡ್ಡಾಯವಾಗಿ ಆಹಾರ ಧಾನ್ಯ ವಿತರಿಸಬೇಕು ಎಂದರು.
ಶಾಲೆಗಳು ಶುರುವಾದ ಬಳಿಕ ಆರು ತಿಂಗಳಿಂದ ಶೇಖರಿಸಿರುವ ಆಹಾರ ಧಾನ್ಯ ಮಕ್ಕಳಿಗೆ ನೀಡುವುದು ಸರಿಯಲ್ಲ. ಎಲ್ಲವನ್ನು ಪರಿಶೀಲಿಸಿ ಹೊಸದಾಗಿ ಬರುವ ಪಡಿತರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.