ಬೀದರ್: ಭಾರಿ ವಾಹನವೊಂದು ನಡು ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ಬೆಳಿಗ್ಗೆಯಿಂದ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಕಮಲನಗರ ತಾಲೂಕಿನ ಚಿಮ್ಮೆಗಾಂವ್ ಗ್ರಾಮದ ಬಳಿ ರಾಜ್ಯ ಹೆದ್ದಾರಿ 122ರ ಇಕ್ಕಟ್ಟಾದ ಸ್ಥಳದಲ್ಲಿ ಭಾರಿ ಗಾತ್ರದ ವಾಹನವೊಂದು ಕೆಟ್ಟು ನಿಂತಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಗ್ರಾನೈಟ್ ಹಾಕಿಕೊಂಡು ಸಾರಿಗೆ ಇಲಾಖೆ ಕಣ್ತಪ್ಪಿಸಿ ಅಕ್ರಮವಾಗಿ ಒಳ ರಸ್ತೆ ಮೂಲಕ ಹೋಗುವಾಗ ಈ ಅವಘಡ ನಡೆದಿದೆ ಎನ್ನಲಾಗಿದೆ.
ಇದರಿಂದಾಗಿ ಮಹಾರಾಷ್ಟ್ರ ಹಾಗೂ ರಾಜ್ಯದ ಗಡಿಯಲ್ಲಿ ಸುಮಾರು 40 ಕಿಲೋ ಮೀಟರ್ ಅಂತರದಲ್ಲಿ ಸಾರಿಗೆ ಸಂಸ್ಥೆಗಳ ಬಸ್ಗಳ ಓಡಾಟ ಬಂದ್ ಆಗಿರುವುದರಿಂದ ಬೆಳಿಗ್ಗೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಲಾರಿ ಕೆಟ್ಟು ನಿಂತರು ಕ್ರೇನ್ ಅಥವಾ ಜೆಸಿಬಿ ಯಂತ್ರಗಳ ಮೂಲಕ ಲಾರಿ ಪಕ್ಕಕ್ಕೆ ಸರಿಸಬಹುದಿತ್ತು. ಆದ್ರೆ ಲಾರಿ ಮಾಲೀಕ ಇದ್ಯಾವುದನ್ನು ಮಾಡದೆ ಸುಮ್ಮನಿರುವುದರಿಂದ ಸ್ಥಿತಿ ಜಟಿಲಗೊಂಡಿದೆ.
ಈ ಭಾಗದಲ್ಲಿ ಇಷ್ಟೊಂದು ಪರದಾಟ ನಡೆಯುತ್ತಿದ್ದರು ಯಾವೊಬ್ಬ ಇಲಾಖೆ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.