ಬಸವಕಲ್ಯಾಣ (ಬೀದರ್) : ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರಿಫೋದ್ದಿನ್ ಅವರ ವರ್ತನೆಯಿಂದ ಬೇಸತ್ತ ಆಶಾ ಕಾರ್ಯಕರ್ತೆಯರು, ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸಿ, ವೈದ್ಯಾಧಿಕಾರಿ ಚಳಿ ಬಿಡಿಸಿದ ಪ್ರಸಂಗ ಹುಲಸೂರ ಪಟ್ಟಣದಲ್ಲಿ ನಡೆಯಿತು.
ಕರೊನಾ ವೈರಸ್ ಜನ ಜಾಗೃತಿ ಕಾರ್ಯಕ್ರಮದ ನಿಮಿತ್ತ ಸ್ಥಳೀಯ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ನಡೆದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಕೆಲ ಆಶಾ ಕಾರ್ಯಕರ್ತೆಯರು ಎದ್ದು ನಿಂತು, ವೈದ್ಯಾಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಹುಲಸೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಬರುವ ಮಹಿಳೆಯರನ್ನು ಸೇರಿದಂತೆ ಯಾವುದೇ ತರಹದ ರೋಗಿಗಳನ್ನು ಇಲ್ಲಿಗ್ಯಾಕೆ ಕರ್ಕೊಂಡ್ ಬರ್ತಿರಿ, ಬೇರೆ ಆಸ್ಪತ್ರೆ ಇಲ್ವಾ ನಿಮಗೆ.? ಎಂದು ವೈದ್ಯರು ಪ್ರಶ್ನಿಸುತ್ತಾರೆ. ಕೆಲವು ಬಾರಿ ನಮ್ಮ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ನಮ್ಮ ಕೆಲಸದ ಬಗ್ಗೆ ಅವಹೇಳನಕಾರಿ ಮಾಡುತ್ತಾರೆ ಎಂದು ಆರೋಪಿಸಿ,ಇಂಥವರ ಮಧ್ಯೆ ನಾವು ಹೇಗೆ ಕೆಲಸ ಮಾಡಬೇಕು? ಇಲಾಖೆಯವರು ನೀಡಿರುವ ಜವಬ್ದಾರಿ ಕೆಲಸಗಳನ್ನ ಹೇಗೆ ನಿಭಾಯಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿ ವೈದ್ಯರನ್ನು ತರಾಟೆಗೆ ತಗೆದುಕೊಂಡರು.
ಸಭೆಯಲಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಲಾ ಡೋಣಗಾಂವಕರ್ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ ಮಧ್ಯ ಪ್ರವೇಶಿಸಿ, ಮಹಿಳಾ ಕಾರ್ಯಕರ್ತರಿಗೆ ಅವಹೇಳನಕಾರಿ ಮಾತನಾಡಬಾರದು. ಇನ್ನು ಮುಂದೆ ನಿಮ್ಮ ವರ್ತನೆ ಸರಿಪಡಿಸಿಕೊಂಡು ಹೀಗಾಗದಂತೆ ನೋಡಿಕೊಳ್ಳಿ ಎಂದು ವೈದ್ಯರಿಗೆ ಸೂಚಿಸುವ ಮೂಲಕ ಆಶಾ ಕಾರ್ಯಕರ್ತೆಯರನ್ನು ಸಮಾಧಾನ ಪಡಿಸಿದರು.