ಬೀದರ್: ಗಣಿಗಾರಿಕೆಗೆ ಸಂಬಂಧಿಸಿದಂತೆ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರ ಸಹೋದರ ಸಂಬಂಧಿ ರೇವಣಸಿದ್ದಪ್ಪ ಪಾಟೀಲ್ ಅವರ ಸಂಬಂಧಿಕರು ನಡು ಬೀದಿಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಜಿಲ್ಲೆಯ ಹುಮನಾಬಾದ್ ಪಟ್ಟಣದ ಶರಣರೆಡ್ಡಿ ಎಂಬ ಕಲ್ಲು ಗಣಿಗಾರಿಕೆ ಮಾಡುವ ವ್ಯಕ್ತಿಯ ಮೇಲೆ ರೇವಣಸಿದ್ದಪ್ಪ ಪಾಟೀಲ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಲ್ಲಿ ಕ್ರಶರ್ ಕುರಿತು ರೇವಣಸಿದ್ದಪ್ಪ ಪಾಟೀಲ್ ಹಾಗೂ ಶರಣ ರೆಡ್ಡಿ ನಡುವಿನ ದ್ವೇಷದಿಂದಾಗಿ ಇಂದು ಶರಣರೆಡ್ಡಿ ಮನೆ ಮುಂದೆ ರೇವಣಸಿದಪ್ಪ ಪಾಟೀಲ್, ಸಂತೋಷ ಪಾಟೀಲ್, ಸುನೀಲ ಪಾಟೀಲ್ ಸೇರಿದಂತೆ ಹಲವರು ಗುಂಪು ಕಟ್ಟಿಕೊಂಡು ನೇರವಾಗಿ ಶರಣ ರೆಡ್ಡಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಶರಣರೆಡ್ಡಿ ಕುಟುಂಬಸ್ಥರು ಕೂಡ ಮಧ್ಯ ಪ್ರವೇಶ ಮಾಡಿದ್ದಾರೆ. ಪರಿಸ್ಥಿತಿ ಕೈ ಮೀರುವುದರ ನಡುವೆ ನಗರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮಾಜಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮತ್ತು ಹಾಲಿ ಹುಮನಾಬಾದ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಾಜಶೇಖರ್ ಪಾಟೀಲ್ ಅವರ ಸಹೋದರ ಸಂಬಂಧಿ ರೇವಣಸಿದ್ದಪ್ಪ ಪಾಟೀಲ್ ಅವರು ನಡೆಸುತ್ತಿರುವ ಜಲ್ಲಿ ಕ್ರಶರ್ಗೆ ವಾಹನಗಳು ಹೋಗಲು ದಾರಿ ಕೊಡುವ ವಿಚಾರದಲ್ಲಿ ಶರಣ ರೆಡ್ಡಿ ಅವರೊಂದಿಗೆ ವಿವಾದವಾಗಿತ್ತು. ಈ ವಿವಾದ ವಿಕೋಪಕ್ಕೆ ತಿರುಗಿ ಇಂದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.