ಬಸವಕಲ್ಯಾಣ: ಮೇಯಲು ಹೋಗಿದ್ದ ಕುರಿ ಮೇಲೆ ಹೆಬ್ಬಾವು ದಾಳಿ ನಡೆಸಿ ಕುರಿಯನ್ನು ನುಂಗಿರುವ ಘಟನೆ ತಾಲೂಕಿನ ಘಾಟ್ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಘಾಟ್ ಹಿಪ್ಪರಗಾ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡ ಬೃಹತ್ ಗಾತ್ರದ ಸುಮಾರು 12 ಅಡಿಯಷ್ಟು ಉದ್ದದ ಹೆಬ್ಬಾವು, ಮೇಯಲು ಬಂದಿದ್ದ ಕುರಿ ಮೇಲೆ ದಾಳಿ ನಡೆಸಿ ನುಂಗಿಹಾಕಿದೆ. ಕುರಿ ರಾಜಕುಮಾರ್ ರೋಡ್ಡೆ ಎನ್ನುವವರಿಗೆ ಸೇರಿದ್ದಾಗಿದ್ದು, ಇದನ್ನು ಗಮನಿಸಿದ ಕುರಿಗಾಯಿ ವ್ಯಕ್ತಿಯು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ತಕ್ಷಣವೇ ಗ್ರಾಮಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಸೈಯದ್ ಮುರ್ತುಜಾ ಖಾದ್ರಿ ನೇತೃತ್ವದ ತಂಡ ಗುಂಡೂರ ಗ್ರಾಮದ ಉರುಗ ತಜ್ಞ ಅಶೋಕ ಶೆಟ್ಟಿ ಅವರ ಸಹಾಯದೊಂದಿಗೆ ಕಾರ್ಯಾಚರಣೆಗೆ ಇಳಿದು ಕಲ್ಲು ಬಂಡೆ ಅಡಿ ಅವಿತು ಕುಳಿತಿದ್ದ ಹೆಬ್ಬಾವು ಸೆರೆ ಹಿಡಿದಿದ್ದಾರೆ. ಬಳಿಕ ಹಾವನ್ನು ಅರಣ್ಯ ಇಲಾಖೆಗೆ ಸೇರಿದ ಕಾಯ್ದಿಟ್ಟ ಪ್ರದೇಶಕ್ಕೆ ಬಿಡಲಾಗಿದೆ. ಇನ್ನು ಹಾವು ಬಿಡುತಿದ್ದಂತೆ ನುಂಗಿದ್ದ ಕುರಿಯನ್ನು ಹೊಟ್ಟೆಯಿಂದ ಹೊರಕ್ಕೆ ಹಾಕಿದೆ.
ಹೆಬ್ಬಾವು ಯಾವುದೇ ಪ್ರಾಣಿಯನ್ನು ನುಂಗಿದ ನಂತರ ಅದನ್ನು ಜೀರ್ಣಿಸಿಕೊಳ್ಳಲು ಕೆಲ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, ನುಂಗಿದ ಕೆಲವೇ ಸಮಯದಲ್ಲಿ ಅದನ್ನು ಹಿಡಿಯುವುದು ಸೇರಿದಂತೆ ಯಾವುದೇ ತರಹದ ತೊಂದರೆ ನೀಡಿದಲ್ಲಿ ತಾನು ನುಂಗಿದ ಪ್ರಾಣಿಯನ್ನು ಹೊಟ್ಟೆಯಿಂದ ಹೊರ ಹಾಕುತ್ತದೆ ಎಂದು ಉಪ ವಲಯ ಅರಣ್ಯಾಧಿಕಾರಿ ಸಂತೋಷ ಯಾಚೆ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ ಯಾಚೆ, ನಿಸಾರ್ ಮನಿಯಾರ್, ಸೈಯದ್ ಮುರ್ತುಜಾ ಖಾದ್ರಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬೋನಿಗೆ ಬಿದ್ದ ಚಿರತೆ: ಜೋಡಿ ಚಿರತೆ ಪೈಕಿ ಗಂಡು ಚಿರತೆ ಸೆರೆ