ಬಸವಕಲ್ಯಾಣ (ಬೀದರ್): ಗ್ರಾಮದ ನೀರಿನ ಸಮಸ್ಯೆ ಪರಿಹರಿಸಬೇಕು ಹಾಗು ಅಸಮರ್ಪಕವಾಗಿ ಕೆಲಸ ಮಾಡುತ್ತಿರುವ ವಾಟರ್ ಮ್ಯಾನ್‌ನನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾ.ಪಂ.ಗೆ ನಾರಾಯಣಪುರ ವಾಡಿಯ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ನೀರು ಬಿಡುವಾತ (ವಾಟರ್ ಮ್ಯಾನ್) ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತ ಯಾವಾಗಲೂ ಮದ್ಯದ ಅಮಲಿನಲ್ಲಿಯೇ ಇರುತ್ತಾನೆ. ಹೀಗಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಾಗಾಗಿ, ಅಸಮರ್ಪಕವಾಗಿ ಕೆಲಸ ಮಾಡುವ ವಾಟರ್‌ಮ್ಯಾನ್ ಬದಲಾಯಿಸಿ ಹೊಸ ವಾಟರ್‌ಮ್ಯಾನ್ ನೇಮಿಸಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗರಂ ಆದರು.
ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಅಧಿಕಾರಿ ಜೈಪ್ರಕಾಶ ಚವ್ಹಾಣ್, ಪ್ರತಿಭಟನಾನಿರತ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.