ಬಸವಕಲ್ಯಾಣ: ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯೊಬ್ಬರ ಕಡೆಯಿಂದ ಅಪಹರಣಕ್ಕೆ ಒಳಗಾಗಿದ್ದ ತಾಲೂಕಿನ ಚಂಡಕಾಪೂರ ಗ್ರಾಮ ಪಂಚಾಯತ್‌ನ 7 ಜನ ಸದಸ್ಯರನ್ನು ರಕ್ಷಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ತೆರಳುತಿದ್ದ ವೇಳೆ ಶನಿವಾರ ತಾಲೂಕಿನ ತಡೋಳಾ ಗ್ರಾಮದ ಸಮೀಪ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿ ಪುತಳಾಬಾಯಿ ಎನ್ನುವವರ ಕುಟುಂಬದವರು ಸೇರಿ ಇತರರು ಹಲ್ಲೆ ನಡೆಸಿ, 7 ಜನ ಸದಸ್ಯರನ್ನು ಅಪಹರಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. 24 ಗಂಟೆಯೊಳಗೆ ಅಪಹರಣಗೊಂಡಿದ್ದ 3 ಜನ ಮಹಿಳಾ ಸದಸ್ಯರು ಹಾಗೂ 4 ಜನ ಪುರುಷ ಸದಸ್ಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಮಹಾರಾಷ್ಟ್ರದ ಉಮ್ಮರ್ಗಾದ ಬಳಿ ಅಪಹರಣಕಾರರು, ಮೂವರು ಮಹಿಳಾ ಸದಸ್ಯರನ್ನು ಬಿಟ್ಟು ಉಳಿದ ನಾಲ್ಕು ಜನ ಪುರುಷ ಸದಸ್ಯರನ್ನು ಕರೆದುಕೊಂಡು ಹೋಗಿದ್ದರು. ಉಳಿದ ನಾಲ್ಕು ಜನ ಸದಸ್ಯರು ರಾಜ್ಯದ ಗಡಿಯಲ್ಲಿ ಕಾರಿನಲ್ಲಿ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ರಕ್ಷಿಸಿದ್ದಾರೆ. ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಧ್ಯಕ್ಷ ಆಕಾಂಕ್ಷಿ ಕುಟುಂಬದ 6 ಜನ ಹಾಗೂ ಇತರರ ಮೇಲೆ ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಿ.ಎಲ್.ನಾಗೇಶ್ ಹೇಳಿದ್ದಾರೆ.