ಬೀದರ್: ಮಾಜಿ ಸಚಿವ ಡಿ.ಕೆ ಶಿವಕುಮಾರ್ರನ್ನು ಸಂವಿಧಾನ ಬದ್ಧವಾಗಿ ನಡೆಯುತ್ತಿರುವ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ, ಹತಾಶೆಯಿಂದ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಅನಗತ್ಯ ಆರೋಪ ಮಾಡ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆದಿಯಾಗಿ ಕಾಂಗ್ರೆಸ್ ನಾಯಕರು, ಬಿಜೆಪಿ ಇಡಿ ಮೂಲಕ ಅಮಾನವೀಯವಾಗಿ ಡಿ.ಕೆ ಶಿವಕುಮಾರ್ಗೆ ಕಿರುಕುಳ ನೀಡ್ತಿದೆ ಎಂಬ ಆರೋಪ ಮಾಡ್ತಿದ್ದಾರೆ. ಎರಡು ವರ್ಷದ ಹಿಂದಿನ ಪ್ರಕರಣ ಇದು, ಅದರ ತನಿಖೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿ ಕೈ ಎಲ್ಲಿಂದ ಬಂತು. ಐದು ದಶಕದ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಇದೇ ರೀತಿ ಆಡಳಿತ ಮಾಡಿದ್ದಾರಾ, ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಆದಾಯಕ್ಕಿಂತ ಹೆಚ್ಚಿನ ಹಣ ಬಂದಿದೆ, ಅದರ ತನಿಖೆಯಾಗುತ್ತೆ. ಪ್ರಧಾನಿ, ಸಿಎಂ, ಅಥವಾ ಖುದ್ದು ನಾನೇ ತಪ್ಪು ಮಾಡಿದ್ರು ತನಿಖೆಯಾಗಬೇಕಲ್ವಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸ್ಥೆಗಳು ತಪ್ಪು ಮಾಡ್ತಿವೆ ಅಂದ್ರೆ ನ್ಯಾಯಾಲಯವಿದೆ. ಅದನ್ನೆಲ್ಲಾ ಬಿಟ್ಟು ಬಿಜೆಪಿ ಕಡೆ ಬೊಟ್ಟು ಮಾಡುವುದು ಅಂದ್ರೆ ಏನರ್ಥ. ಮಾಜಿ ಕೇಂದ್ರ ನಾಯಕ ಪಿ.ಚಿದಂಬರಂ ಸೇರಿದಂತೆ ಬಹುತೇಕರು ಆದಾಯ ಮೀರಿ ಸಂಪಾದನೆ ಮಾಡಿದ್ದು ಕಂಡು ಬಂದಿದೆ. ಅವೆಲ್ಲವೂ ಇಡಿ ತನಿಖೆ ನಡೆಸಬೇಕಲ್ವಾ. ಬಿಜೆಪಿ ಐದು ವರ್ಷಗಳ ಕಾಲ ಅಧಿಕಾರ ಮಾಡಿದೆ ಒಂದಾದ್ರು ಕಪ್ಪು ಚುಕ್ಕೆ ಇದ್ರೆ ಹೇಳಲಿ ಎಂದು ಚವ್ಹಾಣ ಸವಾಲು ಹಾಕಿದರು.