ಬೀದರ್: 'ರಾಜ್ಯದೆಲ್ಲೆಡೆ ಜೆಡಿಎಸ್ ಪರ ಅಲೆ ಇದೆ. ಈ ಬಾರಿ ಸ್ವತಂತ್ರ್ಯವಾಗಿ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು. ಈ ಐದು ವರ್ಷದ ಆಡಳಿತದಲ್ಲಿ ಬಡವರು ಮತ್ತು ರೈತರ ಜೀವನ ಅಭಿವೃದ್ಧಿಗೇ ನನ್ನ ಮೊದಲ ಆದ್ಯತೆ' ಎಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆ ನಿಮಿತ್ತ ಇಲ್ಲಿನ ಗಣೇಶ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 'ಉಚಿತ ಶಿಕ್ಷಣ, ಗ್ರಾಮ ಪಂಚಾಯತಿಗೊಂದು ಆಸ್ಪತ್ರೆ ಸೇರಿದಂತೆ ಪಂಚ ಯೋಜನೆ ರೂಪಿಸಲಾಗಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಈ ಯೋಜನೆಗಳ ಜಾರಿಗೆ ಅನುಕೂಲವಾಗಲಿದೆ' ಎಂದರು.
'ಒಂದರಿಂದ 12ನೇ ತರಗತಿವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರಾಜ್ಯದ ಪ್ರತಿ ಗ್ರಾ.ಪಂಗೆ ಒಂದು ಶಾಲೆ ಆರಂಭಿಸಲಾಗುವುದು. ಆರೋಗ್ಯ ಕ್ಷೇತ್ರದ ಅನುಕೂಲಕ್ಕಾಗಿ ಗ್ರಾ.ಪಂಗೆ ಒಂದು 30 ಹಾಸಿಗೆಯ ಆಸ್ಪತ್ರೆ, ರೈತರಿಗಾಗಿ ನೀರಾವರಿ ಯೋಜನೆ, ನಿರುದ್ಯೋಗಿ ಮತ್ತು ಮಹಿಳೆಯರಿಗಾಗಿ ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುವುದು' ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, 'ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ನಾನು ರಾಜಕೀಯ ಬಿಡುತ್ತೇನೆ. ಉಚಿತ ಶಿಕ್ಷಣ, ಆರೋಗ್ಯ, ರೈತರಿಗೆ ಆರ್ಥಿಕ ಬಲ, ಮಹಿಳೆಯರು, ಯುವಕರಿಗೆ ಸ್ವಯಂ ಉದ್ಯೋಗ ಸೇರಿ ನಾನಾ ಯೋಜನೆಗಳನ್ನು ಜೆಡಿಎಸ್ ರೂಪಿಸಿದೆ. ಈ ಬಾರಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಬೆಂಬಲಿಸಿ' ಎಂದರು. ಬಳಿಕ ಮಾಜಿ ಸಂಸದ ಉಬೇದುಲ್ಲ ಆಜ್ಮಿ, ಶಾಸಕ ಬಂಡೆಪ್ಪ ಖಾಶೆಂಪುರ, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಮಾತನಾಡಿದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಲಾಯಿತು.
ಇದನ್ನೂ ಓದಿ: ಪಂಚರತ್ನ ರಥಯಾತ್ರೆ: 15 ಸಾವಿರ ನಾಣ್ಯದ ಹಾರ, ನೇಗಿಲು ಹಾರ ಹಾಕಿ ಹೆಚ್ಡಿಕೆಗೆ ಸ್ವಾಗತ
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ ಗೌಡ, ಪ್ರಮುಖರಾದ ಅಶೋಕ ಕುಮಾರ ಕರಂಜಿ, ಮಾರುತಿ ಬೌದ್ಧೆ, ರಾಜು ಕಡ್ಯಾಳ, ದೇವೇಂದ್ರ ಸೋನಿ, ಅಶೋಕ ಕೋಡಗೆ, ಐಲಿನಜಾನ್ ಮಠಪತಿ, ರೇವಣಸಿದ್ಧ ಸಿರಕಟನಳ್ಳಿ, ಸುಂದರ ಮಾಳೆಗಾಂವ, ಸುರೇಶ ಮಹಾಗಾಂವ್, ಅಸದೊದ್ದೀನ್ ಸಾಹೇಬ್, ಶಿವರಾಜ್ ಹುಲಿ ಇತರರಿದ್ದರು. ಬೀದರ್ ಉತ್ತರ ಕ್ಷೇತ್ರದ ಅಧ್ಯಕ್ಷ ಬಸವರಾಜ ಪಾಟೀಲ್ ಹಾರೂರಗೇರಿ ಸ್ವಾಗತಿಸಿದರು.
ಇದನ್ನೂ ಓದಿ: ಯುಪಿ ಸಿಎಂ ಕರೆ ತಂದು ರಾಮಮಂದಿರ ನಿರ್ಮಾಣ ಮಾಡುವ ಅಗತ್ಯವಿಲ್ಲ, ನಾನೇ ನಿರ್ಮಾಣ ಮಾಡುತ್ತೇನೆ : ಹೆಚ್ಡಿಕೆ
ಯಾತ್ರೆಗೆ ಭವ್ಯ ಸ್ವಾಗತ: ಪಂಚರತ್ನ ರಥಯಾತ್ರೆಯ 2ನೇ ಹಂತದ ಯಾತ್ರೆಗೆ ಬೀದರ್ನಲ್ಲಿ ಚಾಲನೆ ನೀಡಲಾಯಿತು. ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಪೂಜೆ ಸಲ್ಲಿಸಿ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಸಿದ್ಧಾರೂಢ ಮಠದಿಂದ ಆರಂಭವಾದ ಯಾತ್ರೆ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ಸರ್ಕಲ್, ಚೌಬಾರಾ, ಗವಾನ್ ಚೌಕ್, ಶಾಹಗಂಜ್, ಅಂಬೇಡ್ಕರ್ ವೃತ್ತ, ಶಿವಾಜಿ ಸರ್ಕಲ್, ಹರಳಯ್ಯ ಚೌಕ್ ಮೂಲಕ ಗಣೇಶ ಮೈದಾನಕ್ಕೆ ಆಗಮಿಸಿ ಇಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಸಮಾವೇಶಗೊಂಡಿತು. ಯಾತ್ರೆಯುದ್ದಕ್ಕೂ ಭವ್ಯವಾಗಿ ಸ್ವಾಗತಿಸಲಾಯಿತು. ವಿವಿಧೆಡೆ ಜೆಸಿಬಿ, ಕ್ರೇನ್ ಮೂಲಕ ನಾಯಕರಿಗೆ ಹಾರ ಹಾಕಲಾಯಿತು. ಸಮಾವೇಶ ನಂತರ ಯಾತ್ರೆಯು ರೋಟರಿ ವೃತ್ತ, ಅಂಬೇಡ್ಕರ್ ವೃತ್ತ ಸಿದ್ಧಾರ್ಥ ಕಾಲೇಜು ಮಾರ್ಗವಾಗಿ ಚಾಂಬೋಳ, ಹಿಪ್ಪಳಗಾಂವ್ ಮೂಲಕ ಜನವಾಡಕ್ಕೆ ಆಗಮಿಸಿತು. ಅಲ್ಲಿಯೇ ಕುಮಾರಸ್ವಾಮಿ ವಾಸ್ತವ್ಯ ಮಾಡಿದರು.