ಬಸವಕಲ್ಯಾಣ: ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಪ್ರತಿ ಕೂಲಿ ಕಾರ್ಮಿಕರಿಗೆ 100 ದಿನ ಕೆಲಸ ಸಿಗಲಿದೆ ಎನ್ನುವ ಬಗ್ಗೆ ಭರವಸೆ ಮೂಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಸೂಚಿಸಿದರು.
ತಾಲೂಕಿನ ಪರ್ತಾಪೂರ, ನೀಲಕಂಠ ಗ್ರಾಮದ ಬಳಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕೃಷಿ ಹೊಂಡ ಹಾಗೂ ಮಂಠಾಳನಲ್ಲಿ ನಡೆಯುತ್ತಿರುವ ಕ್ಷೇತ್ರ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆಗೆ ಸಿಲುಕಿದ ಕಾರ್ಮಿಕರಿಗೆ ಗ್ರಾ.ಪಂಗಳ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಿಕೊಟ್ಟಿದ್ದು, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದರು.
ಯೋಜನೆಯಡಿ 100 ದಿನಗಳ ಬದಲಿಗೆ 150 ದಿನ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲ ಕೂಲಿ ಕಾರ್ಮಿಕರು ಇದೇ ಸಂದರ್ಭದಲ್ಲಿ ಆಯುಕ್ತರಲ್ಲಿ ಮನವಿ ಮಾಡಿದರು. ನರೇಗಾ ಯೋಜನೆಯಡಿಯಲ್ಲಿ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಕಾಮಗಾರಿಗಳ ಕುರಿತು ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ತಾ.ಪಂ. ಇಒ ಮಡೋಳಪ್ಪ ಪಿಎಸ್, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಜೈಪ್ರಕಾಶ ಚವ್ಹಾಣ್, ತಾಲೂಕು ತಾಂತ್ರಿಕ ಸಂಯೋಜಕ ಶಿವರಾಜ್ ಪಾಟೀಲ್, ಪಿಡಿಒ ಮಲ್ಲನಗೌಡ ಬಿರಾದಾರ ಹಾಗೂ ಎಕೆ ಆನಂದ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.