ಬಸವಕಲ್ಯಾಣ: ನಗರದ ಬಸ್ ನಿಲ್ದಾಣದ ಪಕ್ಕದ ಪ್ರದೇಶಗಳ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಸ್ಥಳಕ್ಕೆ ಶಾಸಕ ಬಿ.ನಾರಾಯಣರಾವ್ ಭೇಟಿ ನೀಡಿ ಪರಿಶೀಲಿಸಿದರು.
ಮಳೆ ನೀರಿನಿಂದ ಮನೆಗಳು ಜಲಾವೃತಗೊಂಡ ಪ್ರದೇಶಗಳನ್ನು ವೀಕ್ಷಿಸಿದ ಶಾಸಕರು, ಆಗಿರುವ ಹಾನಿ ಕುರಿತು ಜನರಿಂದ ಮಾಹಿತಿ ಪಡೆದರು. ಲಾಲ್ ತಲಾಬ್ ಬಡಾವಣೆ, ಬಿಲಾಲ್ ಕಾಲನಿ, ಅಮೀರಪೇಟ್ ಕಾಲನಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ನಂತರ ಶಾಸಕ ನಾರಾಯಣರಾವ್, ನೀರು ಸಂಗ್ರಹವಾಗುತ್ತಿರುವ ಕಾರಣ ಜನರು ಸಮಸ್ಯೆ ಎದುರಿಸಬೇಕಾಗುತ್ತಿದೆ. ನೀರು ಮುಂದೆ ಹರಿದು ಹೋಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬಸ್ ನಿಲ್ದಾಣದ ಆವರಣದಲ್ಲಿ ಸಹ ನೀರು ನಿಲ್ಲುವ ಕಾರಣ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಬಸ್‌ಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯ ಘಟಕದ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.