ಬೀದರ್: ಕೋವಿಡ್-19 ತಡೆಗಟ್ಟುವಲ್ಲಿ ಸಕ್ರಿಯವಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂಪಾಯಿ ಪ್ರೋತ್ಸಾಹಧನದ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ನಗರದ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಾಂಕೇತಿಕವಾಗಿ 20 ಜನ ಆಶಾ ಕಾರ್ಯಕರ್ತೆಯರಿಗೆ ಚೆಕ್ ವಿತರಿಸಿದ ಸೋಮಶೇಖರ್, ಕೋವಿಡ್-19 ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ ಮೇರೆಗೆ ಆಯಾ ಜಿಲ್ಲೆಗಳಿಗೆ ಜವಾಬ್ದಾರಿ ನೀಡಿದೆ. ಹೀಗಾಗಿ ಬೀದರ್ ಜಿಲ್ಲೆಯ ಜನರು ಇಲ್ಲಿಯವರೆಗೆ ಸಾಕಷ್ಟು ಸಹಕರಿಸಿದ್ದೀರಿ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತಗಳು ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿ ಬಿಎಸ್ಎಸ್ಕೆ ಕಾರ್ಖಾನೆ ಪುನರುಜ್ಜೀವನ ಮಾಡಬೇಕಾಗಿದೆ. ಅದಕ್ಕಾಗಿ ಸಹಾಕರ ಸಚಿವರು ಜಿಲ್ಲೆಯ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ದು ಕಾರ್ಖಾನೆಯ ಮರು ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.