ಬೀದರ್ : ನನೆಗುದಿಗೆ ಬಿದ್ದಿರುವ ಬೀದರ್ ನಾಗರಿಕ ವಿಮಾನಯಾನ, ಬೀದರ್ - ನಾಂದೇಡ ರೈಲ್ವೆ ಯೋಜನೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ.
ನೂತನ ಸಚಿವರಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಸಂಸದ ಭಗವಂತ ಖೂಬಾ ಜತೆಗೂಡಿ ಸರ್ಕಾರದ ಗಮನ ಸೆಳೆದು ಕೂಡಲೇ ವಿಮಾನಯಾನ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ, ಬರ ಪರಿಹಾರ, ಸೇರಿದಂತೆ ಮೂಲ ಸೌಲಭ್ಯಗಳ ಸಮಸ್ಯೆ ನಿವಾರಣೆಗೆ ವರದಿ ಸಿದ್ಧ ಮಾಡಿಕೊಳ್ಳಲಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ದಾಖಲೆಯ ಅನುದಾನ ಬೀದರ್ ಪಾಲಾಗಲಿದೆ ಎಂದು ತಿಳಿಸಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲವಾಗಿಲ್ಲ. ವಿವಿಧ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವೆ. ನಾನು ಗೋ ಮಾತೆಯ ಆರಾಧಕ ಅದಕ್ಕೆ ನನಗೆ ಪಶು ಇಲಾಖೆ ಬಂದಿದೆ. ಜಿಲ್ಲೆಯಲ್ಲಿ ವೇಗಗತಿಯಲ್ಲಿ ಕೆಲಸವಾಗುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮುಂದಿನ ಮೂರುವರೆ ವರ್ಷ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಸಂಸದ ಭಗವಂತ ಖೂಬಾ, ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ, ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೇಲ್ದಾಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.