ಬೀದರ್: ಹಸಿದ ಹೊಟ್ಟೆಗೆ ಊಟ ಕೊಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು ಯುಪಿಎ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಶೋಷಿತ ವರ್ಗಗಳ ಬೃಹತ್ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 7 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಯನ್ನು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಹಾರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದು ಲೋಕಾರ್ಪಣೆ ಮಾಡಲಾಗಿತ್ತು. ಆದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಎಂದು ಹೇಳಿಕೊಳ್ತಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಸವ ಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಈ ರಾಜ್ಯಕ್ಕೆ ಸಿದ್ದರಾಮಯ್ಯ ಬಿಟ್ಟು ಯಾರೂ ದಿಕ್ಕಿಲ್ಲ. ತಂದೆಯಾದ್ರು, ಅಣ್ಣನಾದ್ರು, ತಮ್ಮನಾದ್ರು ಸಿದ್ದರಾಮಯ್ಯನೇ ಮುಂದಿನ ಸಿಎಂ ಎಂದು ಭವಿಷ್ಯ ನುಡಿದರು.
ವೇದಿಕೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ರಾಜಶೇಖರ್ ಪಾಟೀಲ್, ರಹಿಂಖಾನ್, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.