ಬೀದರ್ : ಕೇಂದ್ರ ಸರ್ಕಾರದ ಅನ್ಲಾಕ್-5.0 ಅಡಿ ಸೂಚಿಸಲಾದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯಗೊಳಿಸಿದೆ. ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು, ಮಾಸ್ಕ್ ಹಾಕದೆ ಓಡಾಡುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಾದ್ಯಂದ 400 ದಂಡ ಪುಸ್ತಕ ಮುದ್ರಣವಾಗಿದ್ದು, ನಗರ ಪ್ರದೇಶದಲ್ಲಿ 1000 ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ. ದಂಡ ವಿಸ್ತರಣೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ನಗರದಲ್ಲಿ ಪೊಲೀಸರ ತಂಡ ರಸ್ತೆ ಮೇಲೆ ಸಕ್ರಿಯವಾಗಿದೆ. ಮಾಸ್ಕ್ ಧರಿಸದೆ ರಸ್ತೆಗೆ ಬರುವ ಜನರಿಗೆ ತಲಾ 1000 ರೂ. ದಂಡ ಹಾಕಿದ್ದಾರೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಿಲ್ಲಾಡಳಿತ ನೀಡುವ ದಂಡ ಪುಸ್ತಕ ನೀಡಿದ್ದು, ಅದರಂತೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ಜನರು ಕಡ್ಡಾಯವಾಗಿ ಮುಖದ ಮೇಲೆ ಮಾಸ್ಕ್ ಧರಿಸಲೇಬೇಕು. ಕೊರೊನಾ ನಿಯಂತ್ರಣಕ್ಕೆ ಈ ಪ್ರಕ್ರಿಯೆ ಮೂಲವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದ್ದಾರೆ.