ಬಸವಕಲ್ಯಾಣ (ಬೀದರ್) : ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿ. ಬಡವರ ಸಂಕಷ್ಟಕ್ಕೆ ಮಿಡಿದ ಹೃದಯವಂತ. ಹೋರಾಟಗಾರ. ಹಠವಾದಿ ನಾಯಕ. ಕ್ಷೇತ್ರದ ಅಭಿವೃದ್ಧಿಗೆ ಕನಸು ಕಂಡ ಕನಸುಗಾರ. ಕಂಡ ಕನಸುಗಳು ಸಾಕಾರದ ದಾರಿಯಲ್ಲಿರುವಾಗಲೇ ಅರ್ಧದಲ್ಲಿಯೇ ಎಲ್ಲವನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ ಅಪರೂಪದ ಶಾಸಕ ಬಿ.ನಾರಾಯಣರಾವ್.
ಕೆಲಸ ಯಾವುದೇ ಆಗಿರಲಿ ಅದನ್ನ ಮಾಡಬೇಕು ಎಂದು ಮನಸ್ಸು ಮಾಡಿದರೆ ಸಾಕು, ಹೇಗಾದರೂ ಸರಿ ಅದನ್ನ ಪೂರ್ತಿ ಮಾಡಿಯೇ ಬಿಡಬೇಕು ಎನ್ನುವ ಮನಸ್ಥಿತಿ ಅವರದ್ದಾಗಿದ್ದು. ಎಲ್ಲ ಪಕ್ಷದ ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಹಿಂದಿನಿಂದಲೂ ಉತ್ತಮ ಒಡನಾಟಹೊಂದಿದ ನಾರಾಯಣರಾವ್, ಕಾಡಿ ಬೇಡಿಯಾದರೂ ಸರಿ ಹಿಡಿದ ಕೆಲಸ ಪೂರ್ತಿ ಮಾಡುವವರೆಗೆ ಬಿಡುತ್ತಿರಲಿಲ್ಲ. ಜೀವನದ ಕೊನೆಯಲ್ಲಿ ಸಿಕ್ಕ ಅಲ್ಪ ಸಮಯದಲ್ಲಿಯೇ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ ನಾಯಕ. ಅನುಭವ ಮಂಟಪ ಸೇರಿ ಇನ್ನು ಅನೇಕ ಮಹತ್ವದ ಅಭಿವೃದ್ಧಿ ಕೆಲಸಗಳು ಮುಗಿಸುವ ಮುನ್ನವೇ ಅಂತಿಮ ಪ್ರಯಾಣ ಬೆಳೆಸಿದ್ದು, ದುರ್ದೈವದ ಸಂಗತಿಯೇ ಸರಿ.
ಅನುಭವ ಮಂಟಪ ನಿರ್ಮಾಣವೇ ನನ್ನ ಕೊನೆ ಆಸೆ: ಅನುಭವ ಮಂಟಪ ನಿರ್ಮಾಣ ಮಾಡಬೇಕು ಎನ್ನುವ ಬಸವ ಭಕ್ತರ ಆಸೆಗೆ ನೀರೇರದ ಶಾಸಕ ಬಿ.ನಾರಾಯಣರಾವ್, ಅನುಭವ ಮಂಟಪ ನಿರ್ಮಣವಾಗಬೇಕು ಎನ್ನುವುದು ನನ್ನ ಜೀವನದ ಕೊನೆಯ ಆಸೆಯಾಗಿದೆ. ಅದು ಆಗುವವರೆಗೆ ನಾನು ಸಾಯುವುದಿಲ್ಲ ಎಂದು ಹೇಳುತ್ತಿದ್ದರು. ಜೀವನದಲ್ಲಿ ಶಾಸಕನಾಗಿ ವಿಧಾನ ಸಭೆ ಪ್ರವೇಶಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ಈಗ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈಗ ನನಗೆ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವುದು ಬಿಟ್ಟರೆ ಯಾವುದೇ ಆಸೆ, ಆಕಾಂಕ್ಷಿಗಳು ಉಳಿದಿಲ್ಲ.
12ನೇ ಶತಮಾನದಲ್ಲಿ ಗುರು ಬಸವಣ್ಣನವ ನೇತೃತ್ವದಲ್ಲಿ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿ, ಸಮಾನತೆ ಸಂದೇಶ ಸಾರಿದ ಅನುಭವ ಮಂಟಪ ಮರುಸ್ಥಾಪನೆಯಾಗಬೇಕು. ಸರ್ಕಾರ ಯಾವುದೇ ಇರಲಿ, ಮುಖ್ಯಮಂತ್ರಿ ಯಾರೇ ಆಗಿರಲಿ, ಅನುಭವ ಮಂಟಪ ನಿರ್ಮಾಣ ಮಾಡಿಯೇ ತೀರುತ್ತೇನೆ. ದೇಶದ ರಾಷ್ಟ್ರಪತಿಗಳಿಂದ ಅನುಭವ ಮಂಟಪ ಅಡಿಗಲ್ಲು ನೆರವೇರಿಸುತ್ತೇನೆ ಎಂದು ನಗರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಹೇಳುತ್ತಿದ್ದರು. ಆದ್ರೀಗ ಅರ್ಧದಲ್ಲೇ ಬಿಟ್ಟು ಬಾದ ಲೋಕಕ್ಕೆ ತೆರಳಿದ್ದಾರೆ.
ವಿಧಾನ ಸಭೆಯಲ್ಲೂ ಅನುಭವ ಮಂಟಪ ಪ್ರಸ್ತಾಪ: ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವ ವೇಳೆ ನಡೆದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವ ಸಂಬಂಧ ನಡೆಸಲಾದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುರೆಯಲಿ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದು ಬಿಎಸ್‌ವೈ ಅವರು ಸಿಎಂ ಆಗಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ನಮ್ಮ ಅನುಭವ ಮಂಟಪಕ್ಕೆ ಅನುದಾನ ನೀಡುವುದು ಮಾತ್ರ ಮರೆಯಬಾರದು ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ಆಳುವ ಪಕ್ಷಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಸರಳತೆಯ ಸಾಕಾರ ಮೂರ್ತಿ: ಹಿಂದುಳಿದ ಸಮಾಜದಿಂದ ಬಂದ ನಾರಾಯಣರಾವ್ ಅವರ ಬದುಕು ಸಂಘರ್ಷದಿಂದ ಕೂಡಿತ್ತು. ಸತತ ಹೋರಾಟ, ಪರಿಶ್ರಮದಿಂದ ಜೀವನದ ಕೊನೆ ಘಳಿಗೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ನಾನ್ನೊಬ್ಬ ಶಾಸಕ ಎನ್ನುವ ಅಹಂ ಅವರಿಗಿರಲಿಲ್ಲ. ಶಾಸಕನಾಗಿ ಆಯ್ಕೆಯಾಗುವ ಮುನ್ನ, ನಡೆಸಿದ ಜೀವನಕ್ಕಿಂತಲೂ ಅತ್ಯಂತ ಸರಳ ಜೀವನ ನಡೆಸಿ, ಸರಳತೆಯ ಸಾಕಾರ ಮೂರ್ತಿ ಎನಿಸಿಕೊಂಡಿದ್ದರು. ಅವರಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಸಾತ್ವಿಕ ಆಹಾರ ಸೇವಿಸುತ್ತಿದ್ದ ಅವರ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿತ್ತು. ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸಿ ಶಾಸಕರಾದ ಅವರು, ನಂತರದ ಅವಧಿಯಲ್ಲಿ ತಮ್ಮ ಶಾಕರ ಕಚೇರಿ ಅಥವಾ ಬಿಕೆಡಿಬಿ ಅತಿಥಿ ಗೃಹದಲ್ಲಿಯೇ ವಾಸ್ತವ ಹೂಡುತ್ತಿದ್ದರು. ತಮ್ಮಲ್ಲಿಗೆ ಬರುವ ಪ್ರತಿಯೊಬ್ಬರನ್ನು ನೇರವಾಗಿ ಭೇಟಿ ಮಾಡಿ, ಯೋಗಕ್ಷೇಮೆ ವಿಚಾರಿಸಿದ ನಂತರ ಅವರ ಅಹವಾಲು ಆಲಿಸಿಯೇ ಕಳುಹಿಸುತ್ತಿದ್ದರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತಿದ್ದ ಅವರು, ತಮಗೆ ಪರಿಚಯವಿರುವ (ಯಾವುದೇ ಪಕ್ಷದ ವ್ಯಕ್ತಿ ಇರಲಿ) ಜನರ ಮನೆಗಳಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಗುರುವಿನ ಸೇವೆಗೆ ತೆರಳಿದ ಶಿಷ್ಯ: ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರಮ್ ಸಿಂಗ್ ಅವರ ಆಪ್ತ ಶಿಷ್ಯರಾಗಿದ್ದ ಶಾಸಕ ಬಿ.ನಾರಾಯಣರಾವ್, ಧರಮ್ ಸಿಂಗ್ ಅವರ ನಿಧನದ ನಂತರ ಆತ್ಮಸ್ಥೈರ್ಯ ಕಳೆದುಕೊಂಡಂತೆ ವರ್ತಿಸುತ್ತಿದ್ದರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮತನಾಡುವ ವೇಳೆ, ನಾನು ಧರಮಸಿಂಗ್ ಅವರ ಪಕ್ಕಾ ಶಿಷ್ಯನಾಗಿದ್ದೇನೆ. ಅವರು ನನಗೆ ಅರ್ಧ ದಾರಿಯಲ್ಲಿಯೇ ಬಿಟ್ಟು ತೆರಳಿದ್ದಾರೆ. ನಾನು ಶಾಸಕನಾಗಬೇಕು ಎಂದು ಹರಸಿದ ಪ್ರಮುಖ ನಾಯಕರ ಪೈಕಿ ಧರಮ್ ಸಿಂಗ್ ಅವರು ಮೊದಲಿಗರಾಗಿದ್ದರು. ಆದರೆ ನಾನು ಶಾಸಕನಾಗುವ ಮುನ್ನವೇ ಶಿವನ ಪಾದಕ್ಕೆ ತೆರಳಿದ್ದಾರೆ. ಈಗ ನಾನು ಶಾಸಕನಾಗಿ ಆಯ್ಕೆಯಾಗುವ ಮೂಲಕ ಜೀವನದ ಕೊನೆಯ ಆಸೆ ಈಡೇರಿದೆ. ನನ್ನ ಗುರುಗಳನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ಬೇಗ ಬಾ ಎಂದು ಅವರು ಕರೆಯುತ್ತಿದ್ದಾರೆ. ಅವರ ಸೇವೆ ಮಾಡಲು ನಾನು ಆದಷ್ಟು ಬೇಗ ತೆರಳಬೇಕಿದೆ ಎಂದು ಹಾಸ್ಯಭರಿತವಾಗಿ ಭಾಷಣ ಮಾಡುತ್ತಿದ್ದರು.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದ ಬಿ.ನಾರಾಯಣರಾವ್ : ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದಂತೆ ಕಳೆದ ಏಪ್ರಿಲ್ ತಿಂಗಳಿಂದ ನಿರಂತರವಾಗಿ ಹಗಲು-ರಾತ್ರಿ ಎನ್ನದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸುತ್ತಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ವಾಹನ ನಿಲ್ಲಿಸಿ ಎದುರಿಗೆ ಬಂದವರಿಗೆ ಕೈ ಮುಗಿದು ಅನಗತ್ಯವಾಗಿ ಹೊರಗಡೆ ಬರಬೇಡಿ. ಮುಖಕ್ಕೆ ಮಾಸ್ಕ್ ಧರಿಸಿ, ನಿಮಗೆ ಕೈ ಮುಗಿಯುತ್ತೇನೆ ಎಂದು ಮನವಿ ಮಾಡುತ್ತಿದ್ದರು. ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಕೇಳಿಕೊಳ್ಳುತ್ತಿದ್ದರು. ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಗಳಿಗೆ ಪದೇ ಪದೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸುವ ಜೊತೆಗೆ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.
ಬಡವರ ಸಂಕಷ್ಟಕ್ಕೆ ಮಿಡಿದ ಶಾಸಕ: ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್ಡೌನ್ನಿಂದಾಗಿ ಹಲವರು ಸಂಕಷ್ಟಕ್ಕೊಳಗಾಗಿದ್ದರು. ಅವರ ನೆರವಿಗೆ ಮುಂದಾದ ಶಾಸಕ, ನಗರ ಸೇರಿದಂತೆ ಬಸವಕಲ್ಯಾಣ ತಾಲೂಕಿನ ಹಳ್ಳಿ-ಹಳ್ಳಿಗೂ ಭೇಟಿ ನೀಡಿ, ಸುಮಾರು 50 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದ್ದರು. ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡ ಅನ್ಯ ರಾಜ್ಯದ ಕಾರ್ಮಿಕರಿಗೆ ಊಟದ ವಸತಿ ವ್ಯವಸ್ಥೆ ಮಾಡುವ ಜೊತೆಗೆ ಸ್ವಂತ ಖರ್ಚಿನಲ್ಲಿ ಅವರ ರಾಜ್ಯಗಳಿಗೆ ಸುರಕ್ಷಿತವಾಗಿ ಕಳುಹಿಸಲು ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಶಿಕ್ಷಣ, ಆಸ್ಪತ್ರೆ, ವ್ಯಾಪಾರಕ್ಕೆ ಆದ್ಯತೆ: ಶಾಸಕರಾಗಿ ಆಯ್ಕೆಯಾದಾಗಿನಿಂದ ನಾರಾಯಣರಾವ್, ತಮ್ಮ ಭಾಷಣಗಳಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ವ್ಯಾಪಾರದ ವೃದ್ಧಿಯ ಬಗ್ಗೆ ಕಾಳಜಿ ವಹಿಸಿ ಮಾತನಾಡುತ್ತಿದ್ದರು. ಶಿಕ್ಷಣಕ್ಕಾಗಿ ಇಲ್ಲಿಯ ಮಕ್ಕಳು ಕಲಬುರಗಿ, ಉಡುಪಿ, ಮಂಗಳೂರಿಗೆ ಹೋಗ್ತಾರೆ. ಆಸ್ಪತ್ರೆಗಾಗಿ ಕಲಬುರಗಿ ಸೋಲಾಪೂರಕ್ಕೆ ಹೋಗ್ತಾರೆ. ಇಲ್ಲಿ ಬೆಳೆದ ಆಹಾರಾ ಧಾನ್ಯ ವ್ಯಾಪಾರಕ್ಕಾಗಿ ರೈತರು ನಿಲಂಗಾ, ಲಾತೂರ ಸೇರಿದಂತೆ ಮಹಾರಾಷ್ಟ್ರಕ್ಕೆ ಹೋಗ್ತಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದರು. ಬಸವಕಲ್ಯಾಣದಲ್ಲಿಯೇ ಉತ್ತಮ ಗುಣಮಟ್ಟದ ಶಾಲೆಗಳು ನಿರ್ಮಾಣ ಮಾಡುವುದು. ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆ ಮತ್ತು ಉತ್ತಮ ಮಾರುಕಟ್ಟೆ ನಿರ್ಮಾಣವಾಗಬೇಕು. ಇಲ್ಲಿಯ ಜನ ಯಾವುದಕ್ಕೂ ಬೇರೆಡೆ ಹೋಗಬಾರದು. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವುದೇ ನನ್ನ ಆದ್ಯತೆಯಾಗಿದೆ ಎಂದು ಹೇಳುತ್ತಿದ್ದರು.
ಶಾಸಕನಾಗಿ ಒಮ್ಮೆ ಆಯ್ಕೆ ಮಾಡಿ: ಸಮಾಜದ ಬಡವರು, ಹಿಂದುಳಿದ ವರ್ಗಗಳ ಜನರ ಏಳ್ಗೆಗಾಗಿ ಹೋರಾಡುತ್ತಾ 40 ವರ್ಷ ಕಳೆದಿದ್ದೇನೆ. ಈಗ ನನಗೆ ಆಶೀರ್ವದಿಸಿ ಶಾಸಕನಾಗಿ ಒಮ್ಮೆ ಆಯ್ಕೆ ಮಾಡಿ ಎಂದು ಶಾಸಕನಾಗುವ ಮುನ್ನ ಹೇಳುತ್ತಿದ್ದರು.