ಬೀದರ್: ಮುಂಗಾರು ಹಂಗಾಮಿನ ಸೋಯಾಬಿನ್ ಬಿತ್ತನೆ ಬೀಜ ಸರಬರಾಜು ಮಾಡಲು ಮೇಲಾಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಬೀಜ ವಿತರಣಾ ಕೇಂದ್ರದ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಔರಾದ್ ಕೃಷಿ ತರಬೇತಿ ಕೇಂದ್ರದ ಬೀಜ ವಿತರಣಾ ಕೇಂದ್ರದ ಮುಂಭಾಗ ಕೃಷಿ ಅಧಿಕಾರಿ ಭೀಮರಾವ್ ಸಿಂಧೆಯನ್ನು ಗೇಟ್ಗೆ ಕಟ್ಟಿ ಹಾಕಿದ ಪರಿಣಾಮ ಹೈಡ್ರಾಮಾ ಸೃಷ್ಟಿಯಾಯಿತು.
ಔರಾದ್ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಯಾಬಿನ್ ಬಿತ್ತನೆ ಬೀಜದ ಕೊರತೆ ಇದೆ. ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಈ ವಿಷಯದಲ್ಲಿ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹೆಚ್ಚಿನ ಬೀಜ ಸರಬರಾಜು ಮಾಡ್ತಿಲ್ಲ. ಇದರಲ್ಲಿ ನಂದೇನೂ ತಪ್ಪಿಲ್ಲ. ನಾನು ಫೋನ್ ಮಾಡಿದ್ರೆ ಇಂದು ಬರುತ್ತೆ, ನಾಳೆ ಬರುತ್ತೆ ಅಂತಾರೆ. ನಾನೇನು ಮಾಡಲು ಸಾಧ್ಯ ಎಂದು ಕೃಷಿ ಅಧಿಕಾರಿ ಭೀಮರಾವ್ ಸಿಂಧೆ ನೆರೆದಿದ್ದ ಜನರ ಮುಂದೆ ಅಸಹಾಯಕತೆ ತೋಡಿಕೊಂಡರು. ಬಳಿಕ ಸ್ಥಳಕ್ಕೆ ಬಂದ ಔರಾದ್ ಪಿಎಸ್ಐ ಮಂಜೇಗೌಡ, ಪರಿಸ್ಥಿತಿ ತಿಳಿಗೊಳಿಸಿದರು.
ಔರಾದ್ ಹಾಗೂ ಕಮಲನಗರ ತಾಲೂಕಿನಾದ್ಯಂತ ಸೋಯಾಬಿನ್ ಬಿತ್ತನೆ ಬೀಜದ ಕೊರತೆ ವ್ಯಾಪಕವಾಗಿದೆ. ಮುಂಗಾರು ಮಳೆ ಸಕಾಲಕ್ಕೆ ಆಗಿರುವುದರಿಂದ ರೈತರು ಬೀಜಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಸೋಯಾಬಿನ್ ಬೀಜ ಕೊರತೆ ಕುರಿತು ತಾಲೂಕು ಕೃಷಿ ಅಧಿಕಾರಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.